ಇತರ ಧರ್ಮದವರೊಂದಿಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡೋಣ : ಜನಾಬ್ ಜಮಾಲುದ್ದೀನ್ ಹಿಂದ್
ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಸಭಾಭವನದಲ್ಲಿ ಸೌಹಾರ್ದ ಸಮಿತಿ ಉದ್ಯಾವರ ಇವರ ನೇತೃತ್ವದಲ್ಲಿ ಸರ್ವ ಧರ್ಮೀಯರ ಸಹಕಾರದೊಂದಿಗೆ ಬಕ್ರೀದ್ ಸೌಹಾರ್ದ ಕೂಟದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಬಕ್ರೀದ್ ಹಬ್ಬ ಶಾಂತಿ ಸೌಹಾರ್ದತೆ ಪ್ರೀತಿ ತ್ಯಾಗ ಬಲಿದಾನದ ಸಂಕೇತ. ಹಬ್ಬಗಳನ್ನು ನಾವೇ ಆಚರಿಸುವುದರ ಬದಲು, ಇತರ ಧರ್ಮದವರೊಂದಿಗೆ ಆಚರಿಸಿದಾಗ ಅದರಲ್ಲಿರುವ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಇದರಿಂದ ಹೃದಯ ವೈಶಾಲ್ಯ ಹೆಚ್ಚುತ್ತದೆ ಮತ್ತು ಪರಸ್ಪರ ಕುಂದು ಕೊರತೆಗಳ ಅರಿವು ಗೊತ್ತಾಗುತ್ತದೆ. ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಿದಾಗ ಸಮಾಜದಲ್ಲಿರುವ ಅಪನಂಬಿಕೆಗಳು ದೂರವಾಗುತ್ತವೆ. ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು.
ವಿವೇಕ ಹೆಣ್ಮಕ್ಕಳ ಪ್ರೌಢಶಾಲೆ ಕೋಟ ಇದರ ಪ್ರಾಧ್ಯಾಪಕರಾದ ನರೇಂದ್ರ ಕುಮಾರ್ ಕೋಟ ಮಾತನಾಡಿ, ನಾವು ಜೀವನದಲ್ಲಿ ಕತ್ತರಿಯ ಹಾಗೆ ಕತ್ತರಿಸುವ ಮನಸ್ಥಿತಿಯವರಾಗಿ ರಬಾರದು, ಬದಲಾಗಿ ಮುರಿದ ಮನಸ್ಸುಗಳನ್ನು ಒಂದಾಗಿಸುವ ಸೂಜಿ ಆಗಿರಬೇಕು ಎಂದರು.
ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರಾದ ಲೆಸ್ಲಿ ಅರೋಜ ಮಾತನಾಡಿ, ನಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಹೇಗೆ ಪ್ರೋತ್ಸಾಹ ಮಾಡುತ್ತೇವೆಯೋ, ಅದೇ ರೀತಿ ಧರ್ಮದ ಬಗ್ಗೆ ಅಧ್ಯಯನ ಮಾಡಲು ಪ್ರೋತ್ಸಾಹ ನೀಡಬೇಕು ಎಂದರು.
ಸೌಹಾರ್ದ ಸಮಿತಿ ಉದ್ಯಾವರ ಗೌರವಾಧ್ಯಕ್ಷರಾದ ಉಡುಪಿ ಧರ್ಮಪ್ರಾಂತ್ಯದ ಕುಲಪತಿ, ಸ್ಥಳೀಯ ದೇವಾಲಯದ ಧರ್ಮಗುರು ವಂದನೀಯ ಫಾ. ಸ್ಟ್ಯಾನಿ ಬಿ. ಲೋಬೊ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸೌಹಾರ್ದ ಸಮಿತಿಯ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರೆ, ಫಾ.ರೊಲ್ವಿನ್ ಅರಾನ್ನ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್, ಉದ್ಯಾವರ ಮುಸ್ಲಿಂ ಯೂನಿಟಿ ದುಬೈ ಅಧ್ಯಕ್ಷ ಜನಾಬ್ ಫಿರೋಜ್ ಷರೀಫ್, ಹಾಲಿಮಾ ಸಾಬ್ಜು ಆಡಿಟೋರಿಯಂನ ನಿರ್ದೇಶಕರಾದ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಆಬಿದ್ ಅಲಿ ಸ್ವಾಗತಿಸಿದರೆ, ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿ ಧನ್ಯವಾದ ಸಮರ್ಪಿಸಿದರು. ಪ್ರತಾಪ್ ಕುಮಾರ್ ಮತ್ತು ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಿರಾಜಿಲ್ ಹುದಾ ದಫ್ ಕಮಿಟಿ ಮಂಜೂರು ಇವರಿಂದ ದಫ್ ಕಾರ್ಯಕ್ರಮ ನಡೆಯಿತು.