ಒಗ್ಗಟ್ಟಾಗಿ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಳ್ಳೋಣ – ವಿನಯ ಕುಮಾರ್ ಸೊರಕೆ

ಉದ್ಯಾವರ: ನಮ್ಮ ಅಭಿವೃದ್ಧಿ ಮತ್ತು ಜನಪರ ಕೆಲಸಗಳನ್ನು ಎದುರಿಸಲಾಗದೇ ಬಿಜೆಪಿಯವರು ಧರ್ಮ, ಗಡಿ, ಸೈನ್ಯ ಮೊದಲಾದ ಭಾವನಾತ್ಮಕ ಸಂಗತಿಗಳನ್ನು ಮುನ್ನಲೆಗೆ ತಂದು ಅಪ ಪ್ರಚಾರ ಮಾಡಿ ಜನತೆಯ ಮಾನಸಿಕತೆಯನ್ನು ಭಾವನಾತ್ಮಕವಾಗಿ ಭ್ರಷ್ಟಗೊಳಿಸಿ ಅಧಿಕಾರವನ್ನು ಹಿಡಿದಿರಬಹುದು. ಇದು ಏನೂ ಶಾಶ್ವತವಲ್ಲ. ಜನರಿಗೆ ಇವರ ಮೋಸದ ಅರಿವಾದಾಗ ಖಂಡಿತಾ ಅಧಿಕಾರದಿಂದ ಕಿತ್ತೊಗೆಯುತ್ತಾರೆ. ಹಾಗಾಗಿ ಕಾರ್ಯಕರ್ತರು ದೃತಿಗೆಡಬೇಕಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೋಲು ಎನೂ ಹೊಸತಲ್ಲ. ಸೋತ ಕಾಂಗ್ರೆಸ್ ಪಕ್ಷ ಫಿನಿಕ್ಸ್‌ನಂತೆ ಎದ್ದು ಬಂದ ಇತಿಹಾಸ ನಮ್ಮ ಮುಂದೆ ಇದೆ. ನಾವೆಲ್ಲಾ ಒಗ್ಗಟ್ಟಾಗಿ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಳೋಣ ಎಂದು ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆಯವರು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ನುಡಿದರು.

ಅವರು ಮುಂದುವರಿಯುತ್ತಾ ಇಂದಿನ ಸ್ಥಿತಿ ಕಂಡಾಗ ವಿಧಾನಸಭಾ ಚುನಾವಣೆ ಈ ವಷಾಂತ್ಯದಲ್ಲಿ ಬರುವ ಸಾಧ್ಯತೆಗಳು ಇವೆ. ಅದರೊಂದಿಗೆ ಪಂಚಾಯತ್ ಚುನಾವಣೆಗಳೂ ನಮ್ಮ ಮುಂದಿದೆ. ಈ ಬಗ್ಗೆ ನಾವು ಗಂಭೀರವಾಗಿ ಆಲೋಚನೆ ಮಾಡಿ ಕಾರ್ಯೋನ್ಮುಖರಾಗಬೇಕಾಗಿದೆ. ಪಂಚಾಯತ್ ಚುನಾವಣೆಗೆ ಈಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೆಲಸ ಪ್ರಾರಂಭಿಸಲು ಬೂತು ಮಟ್ಟದ ಸಂಘಟನೆ ಮಾಡಬೇಕು ಎಂದರು.

ದೇಶದ ಆರ್ಥಿಕ ಸ್ಥಿತಿ ಕಂಡು ಕೇಳರಿಯದ ರೀತಿಯಲ್ಲಿ ಕುಸಿಯುತ್ತಿದೆ. ನಿರುದ್ಯೋಗ ತಾಂಡವ ಆಡುತ್ತಿದೆ. ಆದರೆ ನಮ್ಮನ್ನಾಳುವ ಮಂದಿಗೆ ಇದು ತಟ್ಟುತ್ತಾ ಇಲ್ಲ. ಲಕ್ಷಾಂತರ ಜನ ಉದ್ಯೋಗ ಕಳಕೊಳ್ಳುತ್ತಾರೆ ಎಂದಾಗ ಅದರ ಎದುರು ಪಾಕಿಸ್ತಾನ ತಂದು ನಿಲ್ಲಿಸುತ್ತಾರೆ. ಭಾರತದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ ಎಂದರೆ ಸಂವಿಧಾನದ 370 ವಿಧಿ ರದ್ದತಿ ಎಂಬ ಭಾವನಾತ್ಮಕ ವಿಷಯವನ್ನು ತಂದು ಮಾತನಾಡಿ ವಿಷಯದ ಗಂಭೀರತೆಯನ್ನು ತಿಳಿಗೊಳಿಸುತ್ತಾರೆ. ಬಿಜೆಪಿಯ ಈ ರೀತಿ ಜನತೆಯನ್ನು ದಾರಿ ತಪ್ಪಿಸುವ ಹುನ್ನಾರವನ್ನು ವಿಫಲಗೊಳಿಸಲು ನಮ್ಮ ಕಾರ್ಯಕರ್ತರು ಸಜ್ಜಾಗಬೇಕಾಗಿದೆ ಎಂದು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್‌ರವರು ನುಡಿದರು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್ ಉಪಸ್ಥಿತರಿದ್ದರು. ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಶ್ರೀ ಆಬಿದ್ ಆಲಿಯವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!