ಮಹಿಳಾ ದಿನಚರಣೆ ಒಂದು ದಿನಕ್ಕೆ ಸೀಮಿತವಾಗದೆ ಇರಲಿ – ಡಾ ಮಮತಾ
ಬ್ರಹ್ಮಾವರ: ಮಹಿಳಾ ದಿನಾಚರಣೆ ಎನ್ನುವುದು ವರ್ಷದಲ್ಲಿ ಒಂದು ದಿನ ಮಾತ್ರವಾಗದೆ ಪ್ರತಿ ದಿನವೂ ಮಹಿಳೆಯರನ್ನು ಗೌರವಿಸುವ ಮತ್ತು ಗುರುತಿಸುವ ದಿನವಾಗಬೇಕು, ಎಂಬುದಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಕುತ್ಪಾಡಿ ಉಡುಪಿ ವೈದ್ಯಕೀಯ ಅಧೀಕ್ಷಕಿ ಡಾ ಮಮತಾ ಹೇಳಿದರು .
ಬ್ರಹ್ಮಾವರದ ಕ್ಷೇಮಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು . ಕಳೆದ ವರ್ಷದ ಮಿಸೆಸ್ ವರ್ಲ್ಡ್ ಸೂಪರ್ ಮಾಡೆಲಿಂಗ್ ಡಾ. ಪ್ರಿಯದರ್ಶಿನಿ ಮಾತನಾಡಿ ಮಹಿಳೆಯರು ಇಂದು ಎಲ್ಲ ವಿಭಾಗದಲ್ಲಿ ಮುಂದುವರಿಯಲು ಪುರುಷರು ಕಾರಣರಾಗಿದ್ದಾರೆ. ಸ್ತ್ರೀಯರಿಗೆ ಸಿಕ್ಕಿದ ಸ್ವಾತಂತ್ರ್ಯ ಮತ್ತು ಅವಕಾಶಗಳ ದುರುಪಯೋಗವಾಗದಂತೆ ಕಾಪಾಡುವ ಗುರುತರ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು .
ಕ್ಷೇಮಧಾಮ ಆಸ್ಪತ್ರೆಯ ನಿರ್ದೇಶಕ ಡಾ ಬಿ ವಿನಯ್ ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಲಯನ್ಸ್ ಕ್ಲಬ್ ಬ್ರಹ್ಮಗಿರಿಯಅಧ್ಯಕ್ಷ ಹರಿಪ್ರಸಾದ್ ರೈ ಮತ್ತು ಬ್ರಹ್ಮಾವರ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಉದಯ ಶೆಟ್ಟಿ ಉಪಸ್ಥಿತರಿದ್ದರು. ಡಾ.ಚರಿಷ್ಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.