ಕಥೋಲಿಕ್ ಸಭಾದಿಂದ ಉಡುಪಿ ಧರ್ಮಪ್ರಾಂತ್ಯದಲ್ಲಿ ವನಮಹೋತ್ಸವ ಆಚರಣೆ

ಉಡುಪಿ : ಅರಣ್ಯಗಳನ್ನು ನಾಶ ಮಾಡುವಂತಹ ಪ್ರಸ್ತುತ ಕಾಲದಲ್ಲಿ ಕಥೋಲಿಕ್ ಸಭಾ ಉಡುಪಿ ಪ್ರದೇಶ್ (ರಿ), ಉಡುಪಿ ಧರ್ಮಪ್ರಾಂತ್ಯದ ಎಲ್ಲ ಚರ್ಚ್ಗಳಲ್ಲಿ ಕಥೋಲಿಕ್ ಸಭಾ ಸಂಘಟನೆಯ ನೇತೃತ್ವದಲ್ಲಿ ಗಿಡ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ನಿನ್ನೆ ನಡೆಯಿತು.

ಗಿಡವನ್ನು ನೆಡೋಣ ಪ್ರಕೃತಿಯನ್ನು ರಕ್ಷಿಸೋಣ ಎಂಬ  ಧ್ಯೇಯದೊಂದಿಗೆ ಕಥೋಲಿಕ್ ಸಭಾ ಉಡುಪಿ ಕೇಂದ್ರೀಯ ಸಮಿತಿಯು ಜುಲೈ 21, ಆದಿತ್ಯವಾರದಂದು ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಎಲ್ಲ ದೇವಾಲಯಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ಗಿಡ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಚಿಸಿತ್ತು. ಜಿಲ್ಲಾ ಸಮಿತಿಯ ಸೂಚನೆ ಮೇರೆಗೆ ಧರ್ಮ ಪ್ರಾಂತ್ಯದ ಬಹುತೇಕ ಎಲ್ಲ ದೇವಾಲಯಗಳಲ್ಲಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿ ಕಥೋಲಿಕ್ ಸಭಾ ಬಲಿಷ್ಠವಾಗಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡವರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು, ಬಡ ಕುಟುಂಬಗಳಿಗೆ ಮನೆ ಕಟ್ಟಿಕೊಡಲು ನೆರವು, ಕೊಂಕಣಿ ಆರೋಗ್ಯ ಕಾರ್ಡ್, ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರದಂತಹ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ತಿಂಗಳಿನಂತೆ ನಡೆಸುತ್ತಿರುವಂಥ ಸಂಘಟನೆಯು, ಪ್ರಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿದೆ.

 

ವಿವಿಧ ದೇವಾಲಯಗಳಲ್ಲಿ ಕಥೋಲಿಕ್ ಸಭಾ ನೇತೃತ್ವದಲ್ಲಿ ಜರುಗಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಘಟಕಗಳ ಸದಸ್ಯರು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.

ಕೆಥೋಲಿಕ್ ಸಭಾ ಉಡುಪಿ ಜಿಲ್ಲೆಯ ಕೇಂದ್ರೀಯ ಸಮಿತಿಯ ಸೂಚನೆ ಮೇರೆಗೆ ನಡೆದ ಈ ಕಾರ್ಯಕ್ರಮದಲ್ಲಿ 500 ಕ್ಕೂ ಅಧಿಕ ವಿವಿಧ ಬಗೆಯ ಗಿಡ ಗಳನ್ನು ವಿವಿಧ ಚರ್ಚ್ ಆವರಣದಲ್ಲಿ ನೆಡುವ ಮೂಲಕ ವನಮಹೋತ್ಸವ ಆಚರಿಸಿದರೆ, 8,000 ಸಾವಿರಕ್ಕೂ ಅಧಿಕ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಆಧ್ಯಾತ್ಮಿಕ ನಿರ್ದೇಶಕರಾದ ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ರವರ ನಿರ್ದೇಶನದಂತೆ ಕಥೋಲಿಕ್ ಸಭಾ ಉಡುಪಿ ಜಿಲ್ಲೆಯ ಕೇಂದ್ರೀಯ ಸಮಿತಿಯು ಮುನ್ನಡೆಯುತ್ತಿದ್ದು, ಜಿಲ್ಲಾಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಮತ್ತು ಕಾರ್ಯದರ್ಶಿ ಸಂತೋಷ್ ಕರ್ನೇಲಿಯೊ ರವರ ನೇತೃತ್ವದ ಕೇಂದ್ರೀಯ ಸಮಿತಿಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮೆಚ್ಚುಗೆಯನ್ನು ಗಳಿಸಿದೆ.

Leave a Reply

Your email address will not be published. Required fields are marked *

error: Content is protected !!