ಬಿಜೆಪಿಯವರು ಏನೆಲ್ಲ ರದ್ದು ಮಾಡುತ್ತಾರೋ ಮೊದಲು ಮಾಡಿ ಮುಗಿಸಲಿ : ರಮೇಶ ಕುಮಾರ್

ಚಿಕ್ಕಬಳ್ಳಾಪುರ: ‘ಬಿಜೆಪಿಯವರು ಏನೆಲ್ಲ ರದ್ದು ಮಾಡುತ್ತಾರೋ ಮೊದಲು ಮಾಡಿ ಮುಗಿಸಲಿ. ಆ ಮೇಲೆ ಏನು ಮಾಡಬೇಕು ಎಂದು ಯೋಚಿಸೋಣ. ಮೊದಲು ನಕಾರಾತ್ಮಕವಾಗಿರುವುದು ಎಲ್ಲ ಮುಗಿದು ಹೋಗಲಿ. ಸಮಯಾವಕಾಶ ಇದ್ದರೆ ಸಕಾರಾತ್ಮಕವಾದದ್ದು ಮಾಡಲಿ’ ಎಂದು ಹಿಂದಿನ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದರು.

ತಾಲ್ಲೂಕಿನ ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಟಿಪ್ಪು ಜಯಂತಿ ರದ್ದುಪಡಿಸಿದ ಸರ್ಕಾರದ ಕ್ರಮ ಕುರಿತ ಪ್ರಶ್ನೆಗೆ, ‘ಅದು ಅವರ ಖುಷಿ, ಜನರ ವಿವೇಚನೆಗೆ ಬಿಟ್ಟದ್ದು’ ಎಂದು ಚುಟುಕಾಗಿ ಉತ್ತರಿಸಿದರು.

‘ಸಂವಿಧಾನದ ಅಡಿಯಲ್ಲಿ ಸ್ಪೀಕರ್‌ ಸ್ಥಾನದಿಂದ ಶಾಸಕರನ್ನು ಅನರ್ಹಗೊಳಿಸುವ ತೀರ್ಮಾನ ಮಾಡಿರುವೆ. ಅದರ ಬಗ್ಗೆ ವ್ಯಾಖ್ಯಾನ ಮಾಡುವುದು ಗೌರವವಲ್ಲ. ಪಕ್ಷದ ಕಾರ್ಯಕರ್ತನಾಗಿ ನನಗೆ ಸವಾಲಿದೆ. ಮುಂಬರುವ ದಿನಗಳಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾವೆಲ್ಲರೂ ಪುನಃ ಪಕ್ಷ ಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ’ ಎಂದು ತಿಳಿಸಿದರು.

‘ಉಪ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯುತ್ತದೆಯೇ’ ಎಂಬ ಪ್ರಶ್ನೆಗೆ, ‘ಉಪ ಚುನಾವಣೆಯೇ ಬಂದಿಲ್ಲ. ಮಗು ಹುಟ್ಟಿದರೆ ತಾನೆ ಅದಕ್ಕೊಂದು ಹೆಸರಿಡುವುದು. ಇನ್ನೂ ಮದುವೆಯಾಗಿಲ್ಲ, ಮಕ್ಕಳಾಗಿಲ್ಲ ಈಗಲೇ ನಾಮಕಾರಣ ಮಾಡಲು ಆಗುವುದಿಲ್ಲ’ ಎಂದರು.

ಕೆ.ಎಸ್.ಈಶ್ವರಪ್ಪ ಅವರ ಆರೋಪ ಕುರಿತ ಪ್ರಶ್ನೆಗೆ ರಮೇಶ್‌ಕುಮಾರ್, ‘ಅವರಿಗೆ ಗೊತ್ತಿರುವಷ್ಟು ಸಂವಿಧಾನ ನನಗೆ ಗೊತ್ತಿಲ್ಲ’ ಎಂದು ಚುಟುಕಾಗಿ ಉತ್ತರಿಸಿದರು.

Leave a Reply

Your email address will not be published. Required fields are marked *

error: Content is protected !!