ನನ್ನ ಅವಧಿಯ ಅನುದಾನಗಳ ಉದ್ಘಾಟನೆ ಲಾಲಾಜಿ ನೆರವೇರಿಸುತ್ತಿದ್ದಾರೆ: ಸೊರಕೆ

ಪಡುಬಿದ್ರಿ: ‘ಕಾಪು ಪುರಸಭೆಯ ಅಭಿವೃದ್ಧಿಗೆ ಮಂಜೂರಾತಿ ದೊರಕಿದ್ದರೂ ಯಾವುದೇ ಕೆಲಸ, ಕಾರ್ಯಗಳು ನಡೆಯುತ್ತಿಲ್ಲ. ಕಾಪು ಶಾಸಕರು ಈ ನಿಟ್ಟಿನಲ್ಲಿ ವೈಫಲ್ಯ ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇದೇ 26ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದರು.

ಕಾಪು ರಾಜೀವ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ‘ಅಂದು ರಾಜೀವ್ ಭವನದಿಂದ ಮೆರವಣಿಗೆ ಹೊರಟು ಪುರಸಭೆಯ ಎದುರಿನಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

‘‌ನನ್ನ ಅಧಿಕಾರಾವಧಿಯಲ್ಲಿ ಮಂಜೂರಾತಿ ದೊರಕಿದ ಅನುದಾನಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಲಾಲಾಜಿ ಮೆಂಡನ್ ನೆರವೇರಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದ ಸೊರಕೆ, ‘ಕಾಪು ಪುರಸಭೆಗೆ ಬಿಜೆಪಿ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಲಾಲಾಜಿ ಮೆಂಡನ್ ಶಾಸಕರಾಗಿ ಬಂದ ಬಳಿಕ ನಗರ ಪ್ರಾಧಿಕಾರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಚುನಾವಣಾ ಸಂದರ್ಭದಲ್ಲಿ ಹೇಳಿತ್ತು. ಆದರೆ, ಅವರು ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನಗರ ಪ್ರಾಧಿಕಾರಕ್ಕೆ ಮಾಸ್ಟರ್‌ಪ್ಲ್ಯಾನ್ ರಚಿಸಿ ಅದಕ್ಕೊಂದು ಬೈಲಾ ಮಾಡಿದಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

‘ಕಾಪು ಪುರಸಭೆಯ ಎಸ್‌ಸಿ, ಎಸ್‌ಟಿ ವಿವಿಧ ಕಾಮಗಾರಿಗಾಗಿ ನನ್ನ ಅಧಿಕಾರಾವಧಿಯಲ್ಲಿ ಮಂಜೂರಾತಿ ದೊರಕಿತ್ತು. ಆದರೆ ಇಂದು ಈ ಅನುದಾನವನ್ನು ಬಳಸಿಕೊಳ್ಳದೆ ಅದನ್ನು ಕಾರ್ಕಳಕ್ಕೆ ವರ್ಗಾವಣೆ ಮಾಡಲಾಗಿದೆ. ಮೀನು ಮಾರುಕಟ್ಟೆ ಅಭಿವೃದ್ಧಿಗೆ ₹1.40 ಕೋಟಿ ಅನುದಾನ ಜೋಡಿಸಲಾಗಿತ್ತು. ಆ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ಆದರೆ, ಈ ರಸ್ತೆ ಕಾಮಗಾರಿಯೂ ಕಳಪೆಯಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು’ ಎಂದರು.

‘ನನ್ನ ಅವಧಿಯಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿಗಾಗಿ ₹55 ಕೋಟಿ ಅನುದಾನ ಮಂಜೂರಾತಿ ದೊರಕಿತ್ತು. ಇದರಲ್ಲಿ ಸ್ಥಳೀಯರಿಗೂ ನೀರು ದೊರಕಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅವರು ವಿಫಲರಾಗಿದ್ದಾರೆ’ ಎಂದು ಹೇಳಿದರು.

‘₹5 ಕೋಟಿ ವೆಚ್ಚದಲ್ಲಿ ಎಲ್ಲೂರಿನಲ್ಲಿ ಕಸ ವಿಲೇವಾರಿ ಘಟಕಕ್ಕೆ ಮಂಜೂರಾತಿ ದೊರಕಿತ್ತು. ಆದರೆ, ಸ್ಥಳೀಯರ ವಿರೋಧದ ಬಳಿಕ ಕಾರ್ಯ ಸ್ಥಗಿತಗೊಂಡಿತ್ತು. ಈ ಬಗ್ಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಮೂಳೂರಿನಲ್ಲಿ ವಸತಿರಹಿತರಿಗಾಗಿ 500 ಮನೆಗಳ ಮಂಜೂರಾಗಿದ್ದವು. ಫ್ಲಾಟ್ ಮಾದರಿಯಲ್ಲಿ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಅದನ್ನು ಈವರೆಗೂ ಅನುಷ್ಠಾನಕ್ಕೆ ತಂದಿಲ್ಲ. ಕಾಪುವಿಗೆ ಮಿನಿ ವಿಧಾನಸೌಧಕ್ಕೆ ₹10 ಕೋಟಿ ಹಣ ಮಂಜೂರಾತಿ ದೊರಕಿದ್ದರೂ ಅದನ್ನು ಬಿಡುಗಡೆ ಮಾಡಿಸಲು ಶಾಸಕರಿಗೆ ಇನ್ನೂ ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!