ಕುಂದಾಪುರ: ಜೋರ್ಮಕ್ಕಿ ಬಾಬು ಶೆಟ್ಟಿ ಕೊಲೆ ಪ್ರಕರಣದ ಆರು ಆರೋಪಿಗಳ ಬಂಧನ

ಕುಂದಾಪುರ: ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕನ್ಯಾನ ಕಲ್ಕಂಬ ಎಂಬಲ್ಲಿ ನಡೆದ ಜೋರ್ಮಕ್ಕಿ ಬಾಬು ಶೆಟ್ಟಿಯವರ ಭೀಕರ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್‌ ನೇತ್ರತ್ವದ ಪೊಲೀಸರ ತಂಡ ಬಂಧಿಸಿದೆ.

ನೇರಳಕಟ್ಟೆ ನಿವಾಸಿ ತೇಜಪ್ಪ ಶೆಟ್ಟಿ (68) ಪ್ರಕರಣ ಪ್ರಮುಖ ಆರೋಪಿಯಾಗಿದ್ದು, ಶೆಟ್ರಕಟ್ಟೆ ನಿವಾಸಿ ಉದಯ್ ರಾಜ್ ಶೆಟ್ಟಿ(55) ಕೊಲೆಗೆ ಸಂಚು ರೂಪಿಸಿದ್ದು, ಕೆಂಚನೂರಿನ ರಮೇಶ್ ಪೂಜಾರಿ (25), ಆನಗಳ್ಳಿ ನಿವಾಸಿ ಪ್ರವೀಣ್ ಪೂಜಾರಿ (25), ಬಸ್ರೂರು ನಿವಾಸಿ ಸಚಿನ್ ಪೂಜಾರಿ (21), ಆನಗಳ್ಳಿಯ ರಾಘವೇಂದ್ರ ಪೂಜಾರಿ (24) ಕೊಲೆ ಮಾಡಿದ ಆರೋಪಿಗಳು.

ಕೊಲೆಯಾದ ಬಾಬು ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ ನಡುವೆ ಮೊದಲಿನಿಂದಲೂ ವೈಮನಸ್ಸಿದ್ದು ಇಬ್ಬರ ನಡುವೆ ಆಗ್ಗಾಗೆ ಗಲಾಟೆ ನಡೆಯುತ್ತಿತ್ತು. ಅಲ್ಲದೇ ನೇರಳಕಟ್ಟೆ ಭಾಗದಲ್ಲಿ ಇತ್ತೀಚೆಗೆ ನಡೆದ ಎರಡು ಕೊಲೆಯತ್ನ ಪ್ರಕರಣದಲ್ಲಿಯೂ ಕೂಡ ಬಾಬು ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ ನಡುವೆ ಘರ್ಷಣೆಯಾಗಿದ್ದು ತೇಜಪ್ಪ ಶೆಟ್ಟಿ ಇದನ್ನು ಗಂಭೀರವಾಗಿ ತೆಗೆದುಕೊಂಡು ಬಾಬು ಶೆಟ್ಟಿಯನ್ನು ಕೊಲ್ಲಬೇಕೆಂದು ಸಂಚು ರೂಪಿಸಿದ್ದ. ಇದಕ್ಕೆ ಸಹಕಾರ ನೀಡಿದವನೇ ಉದಯ್ ರಾಜ್ ಶೆಟ್ಟಿ. ಕೊಲೆ ನಡೆದ ದಿನ ಮಧ್ಯಾಹ್ನ ಬಾಬು ಶೆಟ್ಟಿಗೆ ಕರೆ ಮಾಡಿದ ಆರೋಪಿಗಳು ಗೊಬ್ಬರ ಸಾಗಾಟ ಮಾಡಬೇಕಿದ್ದು ಅದನ್ನು ತೋರಿಸುತ್ತೇವೆ ಬನ್ನಿ ಎಂದಿದ್ದರು. ಅಲ್ಲಿಗೆ ಬೈಕಿನಲ್ಲಿ ಬಂದ ಬಾಬು ಶೆಟ್ಟಿಯನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದರು.

ಉಡುಪಿ ಎಸ್ಪಿ ನಿಶಾ ಜೇಮ್ಸ್ ಮಾರ್ಗದರ್ಶನದಲ್ಲಿ, ಎಎಸ್ಪಿ ಹರಿರಾಂ ಶಂಕರ್, ಡಿಸಿಐಬಿ ಇನ್ಸ್‌ಪೆಕ್ಟರ್‌ ಕಿರಣ್, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್‌ ಡಿ.ಆರ್ ಮಂಜಪ್ಪ, ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್, ಶಂಕರನಾರಾಯಣ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್, ಕುಂದಾಪುರ ಪಿಎಸ್ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಒಂಬತ್ತು ದಿನದಲ್ಲಿ ಬಂಧಿಸಿದೆ. ಇನ್ನೂ ಕೂಡ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!