ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಸೋಂಕಿನ ನ್ಯೂಸ್ ನೋಡಿ ಕೆಎಸ್ ಆರ್ ಟಿಸಿ ನೌಕರ ಆತ್ಮಹತ್ಯೆ!

ಬ್ರಹ್ಮಾವರ: ದಿನ ನಿತ್ಯ ಸಾಮಾಜಿಕ ಜಾಲತಾಣ, ಟಿವಿ ಚಾನೆಲ್‌ಗಳಲ್ಲಿ ಕೊರೋನಾ ಸೋಂಕಿನ ನ್ಯೂಸ್ ನೋಡಿ ತನಗೂ ಸೋಂಕು ತಗುಲಿದೆಂದು ಭೀತಿಯಲ್ಲಿ ಕೆಎಸ್ ಆರ್ ಟಿಸಿ ನೌಕರನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


ಉಪ್ಪೂರಿನ ನರ್ನಾಡಿನ ಗೋಪಾಲಕೃಷ್ಣ (56ವ) ಎಂಬವರು ಇಂದು ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡವರು. ಮಂಗಳವಾರ ರಾತ್ರಿ 2 ಗಂಟೆಯವರೆಗೂ ಎಚ್ಚರದಲ್ಲಿದ್ದು ಮನೆಯವರೊಂದಿಗೆ ಮಾತನಾಡಿದ್ದರು.


ದಿನ ನಿತ್ಯ ವಾಟ್ಸ್‌ಪ್ ಗಳಲ್ಲಿ ಕೊರೋನಾ ನ್ಯೂಸ್‌ನ ಮಾಹಿತಿ ನೋಡುತ್ತಿದ್ದ ಗೋಪಾಲ್ ಇದೇ ಗೀಳು ಮನಸ್ಸಿನಲ್ಲಿ ಆಳವಾಗಿ ತೆಗೆದುಕೊಂಡಿದ್ದರು. ಇದು ತನಗೂ ಬಂದಿರುವ ಸಾಧ್ಯತೆ ಇದೆಂದು ಡೆತ್‌ನೋಟ್ ಬರೆದು, ಮನೆಯ ಹಿಂಬದಿಯ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಆತ್ಮಹತ್ಯೆಗೂ ಮೊದಲು ನನಗೆ ಕೊರೋನಾ ಶಂಕೆ ಇರುವುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಚೀಟಿ ಬರೆದಿಟ್ಟಿದ್ದಾರೆಂದು ತಿಳಿದು ಬಂದಿದೆ. ಆದರೆ ಇವರಿಗೆ ಕೊರೋನಾ ಲಕ್ಷಣಗಳು ಇಲ್ಲವಾಗಿತ್ತು ಎಂದು ಸ್ಥಳಿಯರು ತಿಳಿಸಿದ್ದಾರೆ. ತನ್ನ ಸ್ನೇಹಿತರೊಬ್ಬರಿಗೆ ಕೊರೋನ ಲಕ್ಷಣ ಇತ್ತು ಎಂದು ಮಾತನಾಡಿಕೊಳ್ಳುತ್ತಿದ್ದರೆನ್ನಲಾಗಿದೆ. ಆ ಭೀತಿಯೇ ಇವರ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಕೊರೋನಾ ಶಂಕೆಯ ಡೆತ್ ನೋಟ್ ಹಿನ್ನೆಲೆಯಲ್ಲಿ ಮೃತದೇಹವನ್ನು ಮರದಿಂದ ಕೆಳಗಿಳಿಸಲು ಮಧ್ಯಾಹ್ನದ ತನಕ ಕಾದಿದ್ದು ಸ್ಥಳಿಯರು ಸೂಕ್ತ ಮಂಜಾಗ್ರತೆಗಾಗಿ ಪೊಲೀಸರು ಹಾಗೂ ಆರೋಗ್ಯ ಇಲಾಖಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ.


ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಆಗಿ ಕರ್ತವ್ಯ ಸಲ್ಲಿಸಿದ್ದ ಗೋಪಾಲಕೃಷ್ಣ ಅವರು ಇತ್ತೀಚೆಗೆ ಹೊಸ ಡ್ರೈವರ್‌ಗಳಿಗೆ ತರಬೇತಿ ನೀಡುವ ಕರ್ತವ್ಯ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಇವರು ಮೂಲತಃ ಕೊಕ್ಕರ್ಣೆಯವರಾಗಿದ್ದು ಪ್ರಸ್ತುತ ಉಪ್ಪೂರಿನಲ್ಲಿ ಹೊಸ ನಿರ್ಮಿಸಿ ವಾಸವಾಗಿದ್ದಾರೆ. ಮೃತರಿಗೆ ಹೆಂಡತಿ ಹಾಗೂ ಒಂದು ಗಂಡು ಹಾಗೂ ಓರ್ವ ಪುತ್ರಿ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!