ಸಮಾಜಕಾರ್ಯದಲ್ಲಿ ಕೃಷ್ಣಮಠ ಮುಂಚೂಣಿ ; ಆರ್ ಅಶೋಕ್
ಉಡುಪಿ- ದೇಶದಲ್ಲಿ ಸವಾಲುಗಳು ಎದುರಾದಾಗ ಅದಕ್ಕೆ ಪೂರಕವಾಗಿ ಮಠಮಂದಿರಗಳು ಸ್ಪಂದಿಸಿವೆ ಹಣದ ಕೊರತೆ ಉಂಟಾದ ಅನ್ನದಾನ ಮಹತ್ವ ಹಾಗೂ ಪ್ರಸ್ತುತ ಪರಿಸರ ಸಂರಕ್ಷಣೆ ಅತೀ ಅಗತ್ಯವಾಗಿದ್ದು ಅದಮಾರು ಮಠದ ಪರಿಸರ ಕಾಳಜಿಯ ಯೋಜನೆಗಳು ದಾರಿದೀಪವಾಗಿದೆ. ಸಮಾಜಕಾರ್ಯದಲ್ಲಿ ಕೃಷ್ಣಮಠ ಮುಂಚೂಣಿಯಲ್ಲಿದೆ ಎಂದು ಕಂದಾಯ ಮತ್ತು ಪೌರಾಡಳಿತ ಸಚಿವ ಆರ್ ಅಶೋಕ್ ಹೇಳಿದರು.
ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಅಭಿನಂದನೆ ಮತ್ತು ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ದೆಹಲಿಯಲ್ಲಿ ಪರಿಸರ ಮಾಲಿನ್ಯದಿಂದ ಮಾಸ್ಕ್ ಹಾಕಿಕೊಂಡು ತಿರುಗಾಡುವ ಪರಿಸ್ಥಿತಿ ಇದೆ ಇದನ್ನು ಗಮನಿಸಿದರೆ ಮನುಕುಲದ ಉಳಿವಿಗೆ ಮತ್ತು ಮುಂದಿನ ಜನಾಂಗಕ್ಕೆ ಪರಿಸರ ಸಂರಕ್ಷಣೆ ಅತಿ ಅಗತ್ಯವಾಗಿದೆ ಗಾಂಧೀಜಿಯವರ ಮಾತಿನಂತೆ ಗಾಳಿ, ನೀರು, ಬೆಳಕು ಮುಂದಿನ ಜನಾಂಗಕ್ಕೆ ಕಲುಷಿತಗೊಳಿಸಿ ನೀಡಬಾರದು ಎಂಬ ಎಚ್ಚರಿಕೆ ಪ್ರತಿಯೊಬ್ಬರಲ್ಲೂ ಅಗತ್ಯ ಎಂದರು.
ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅಭಿನಂದನಾ ಭಾಷಣ ಮಾಡಿ, ಜ್ಞಾನ ರಕ್ಷಣೆಗೆ ಕೃಷ್ಣ ತೋರಿಸಿದ ಕಾಳಜಿ ಮಹತ್ವದ್ದಾಗಿದೆ. ಮಠ ಮಂದಿರಗಳು ಕೇವಲ ಧಾರ್ಮಿಕ ವಿಷಯಗಳಲ್ಲಿ ಮಾತ್ರ ತೊಡಗಿಸಿಕೊಳ್ಳದೆ ರಾಷ್ಟ್ರ ನಿರ್ಮಾಣ, ಮೂಢನಂಬಿಕೆ ನಿವಾರಣೆ, ಧರ್ಮ ಜಾಗೃತಿ ಮೂಡಿಸಬೇಕಿದೆ. ಅನೇಕ ಧಾರ್ಮಿಕ ನಾಯಕರು ದೇಶಕ್ಕೆ ನಾಯಕತ್ವ ಕೊಟ್ಟಿದ್ದಾರೆ ಎಂದರು.
ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಶ್ರೀ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು
ಪೌರಾಡಳಿತ ಮತ್ತು ಕಂದಾಯ ಸಚಿವ ಆರ್. ಅಶೋಕ್ ನಗರಸಭೆ ಪರವಾಗಿ ಅದಮಾರು ಶ್ರೀಗಳಿಗೆ ಪೌರಸಮ್ಮಾನ ನೆರವೇರಿಸಿದರು.
ಜಿಲ್ಲಾಧಿಕಾರಿ ಜಗದೀಶ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಯು.ಆರ್. ಸಭಾಪತಿ, ಮಾಜಿ ಐಪಿಎಸ್ ಅಣ್ಣಾಮಲೈ, ದಿವಾನ್ ಲಕ್ಷ್ಮೀನಾರಾಯಣ ಮುಚ್ಚಿಂತಾಯ, ಶ್ರೀಕೃಷ್ಣ ಸೇವಾ ಬಳಗ ಅಧ್ಯಕ್ಷ ಎಂ.ಬಿ. ಪುರಾಣಿಕ್, ಆನಂದ ಕಲ್ಲೋಳಿಕರ್ ಉಪಸ್ಥಿತರಿದ್ದರು.
ಶ್ರೀಕೃಷ್ಣ ಸೇವಾ ಬಳಗ ಗೌರವಾಧ್ಯಕ್ಷ ಶಾಸಕ ರಘುಪತಿ ಭಟ್ ಸ್ವಾಗತಿಸಿದರು. ಗೋವಿಂದರಾಜ್ ಶ್ರೀಕೃಷ್ಣ ಸೇವಾ ಬಳಗದ ಅಭಿನಂದನಾ ಪತ್ರ ವಾಚಿಸಿದರು. ಉಪನ್ಯಾಸಕ ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.