ನೃತ್ಯಸೇವೆ ಮೂಲಕ ನೃತ್ಯಕಲಾವಿದರ ಶ್ರೀ ಕೃಷ್ಣಲೀಲೋತ್ಸವ ಆಚರಣೆ
ನೃತ್ಯನಿಕೇತನ ಕೊಡವೂರು ಸಂಸ್ಥೆಯ ಸಮಾನ ಮನಸ್ಕ ವಿದ್ಯಾರ್ಥಿನಿಯರಿಂದ ಬಡರೋಗಿಗಳಿಗೆ, ನೊಂದವರಿಗೆ, ನಿರಾಶ್ರಿತರಿಗೆ, ಆರ್ಥಿಕ ಸಹಾಯ ಮಾಡುವುದಕ್ಕಾಗಿ ಪ್ರಪ್ರಥಮವಾಗಿ ಆಯ್ದ ಸುಮಾರು 50 ಮನೆಗಳಿಗೆ ತೆರಳಿ ಶ್ರೀಕೃಷ್ಣನ ಬಗೆಗಿನ ವರ್ಣನೆಯ ನ್ರತ್ಯ ಸೇವೆಯನ್ನುನೀಡಿದರು. ಯುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರ ಸಾಮಾಜಿಕ ಚಿಂತನೆಗೆ ನೀರೆರೆದವರು ನ್ರತ್ಯ ಗುರುಗಳಾದ ಸುಧೀರ್ ರಾವ್ ಕೊಡವೂರು ಹಾಗು ಮಾನಸಿ ಸುಧೀರ್.
ಬೆಳಿಗ್ಗೆ 7.00 ಗಂಟೆಯಿಂದ 14 ವಿದ್ಯಾರ್ಥಿನಿಯರ ತಂಡ ಉಡುಪಿಯ ಸುತ್ತಲಿನ ಪರಿಸರದ ಮನೆ ಮನೆಗಳಿಗೆ ತೆರಳಿ ಸುಮಾರು ಐದು ನಿಮಿಷದ ನೃತ್ಯ ಪ್ರಸ್ತುತಿಯೊಂದಿಗೆ ಶ್ರೀಕೃಷ್ಣನ ಲೀಲಾಮೃತದ ಸವಿಯನ್ನು ಉಣಬಡಿಸಿದರು. ಯಾವುದೇ ಬೇಡಿಕೆಯನ್ನು ಸಲ್ಲಿಸದೆ ಸ್ವಯಂಪ್ರೇರಿತರಾಗಿ ನೃತ್ಯ ಸೇವೆಯನ್ನು ಮಾಡಿ , ಮನೆಯವರು ನೀಡಿದ ಸಹಾಯ ಧನವನ್ನು ಸ್ವೀಕರಿಸಿ ತಾವು ಆಲೋಚಿಸಿರುವ ಜನಹಿತ ಕಾರ್ಯಗಳಿಗೆ ವಿನಿಯೋಗಿಸುವ ಆಶಯದೊಂದಿಗೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ನೃತ್ಯನಿಕೇತನ ಕೊಡವೂರಿನ ವಿದುಷಿ ಅನಘಶ್ರೀ, ವಸುಂಧರ, ಅಶ್ವಿನಿ, ಸಾಧನ, ಶ್ರೇಯಾ ಭಟ್, ಶ್ರೇಯಾ ಆಚಾರ್ಯ, ಶ್ರೇಯಾ ಪೈ, ಸಂಜನ, ಶೀತಲ್, ಪ್ರಿಯಂವದ, ನಿಖಿತ, ಭಾವನ ಕೆರೆಮಠ, ಚೈತನ್ಯ ಮತ್ತು ಸುಪ್ರಭ ನೃತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಕೃಷ್ಣ ಹಾಗು ಗೋಪಿಕೆಯರು .
ನೃತ್ಯನಿಕೇತನ ಕೊಡವೂರು ಉಡುಪಿಯ ಈ ಹುಡುಗಿಯರು ಕಾಲೇಜು ಓದಿನ ಜತೆ ನೃತ್ಯವನ್ನೂ ಗಂಭೀರವಾಗಿ ಕಲಿಯುತ್ತಿರುವವರು. ಕೃಷ್ಣಾಷ್ಟಮಿಗೆ ಉಡುಪಿಯಲ್ಲಿ ಎಷ್ಟು ಮಹತ್ವವಿದೆ ಅಂತ ನಮಗೆಲ್ಲ ತಿಳಿದಿದೆ. ಈ ದಿನ ಈ ಹುಡುಗಿಯರು ನಗರದ ಬೇರೆ ಬೇರೆ ಮನೆಗಳಿಗೆ, ಗಲ್ಲಿಗಳಿಗೆ ತೆರಳಿ ನೃತ್ಯ ಪ್ರದರ್ಶಿಸಿ ಗಳಿಸಿದ ಹಣವನ್ನು ಬಡವರ ಸಹಾಯಕ್ಕಾಗಿ ವಿನಿಯೋಗಿಸಿದ್ದಾರೆ.
ನಾನೂ ಈ ಸಂಘಟನೆಯ ಜತೆ ಗುರುತಿಸಿಕೊಂಡಿರುವದು ಹೆಮ್ಮೆ ತಂದಿದೆ. ಮೊನ್ನೆ ಮಾತ್ರ ಕಲೆಯ ಸಾಮಾಜಿಕ ಉದ್ದೇಶದ ಕುರಿತು ಟಿ.ಎಮ್.ಕೃಷ್ಣರ ಲೇಖನ ಓದುತ್ತಿದ್ದನನಗೆ ಈ ಕೆಲಸ ನೋಡಿ ಖುಷಿಯಾಗಿ ಹೋಯ್ತು. ಅವರನ್ನು ಕಲೆಯ ಜತೆ ಸಮಾಜ ಸಂಸ್ಕೃತಿ ಕಾರ್ಯಕ್ಕೂ ಅಣಿಗೊಳಿಸಿದ ವಿದ್ವಾನ್ ಸುಧೀರ್ ಹಾಗೂ ಮಾನಸಿ ಕೊಡವೂರು ಇವರಿಗೂ, ಅನಘಶ್ರೀ ಹಾಗೂ ತಂಡದ ಎಲ್ಲ ಕಲಾವಿದೆಯರಿಗೂ ಅಭಿವಂದನೆ.
ನೃತ್ಯ ವಿದ್ಯಾರ್ಥಿಗಳಾದ ನಾವೆಲ್ಲಾ ಸೇರಿ ಸಮಾಜಕ್ಕೆ ಏನಾದರೊಂದು ನಮ್ಮ ಕೈಲಾದ ಸೇವೆಯನ್ನು ಮಾಡ ಬೇಕೆಂಬ ಉದ್ದೇಶದಿಂದ ಈ ಒಂದು ಸಾಹಸಕ್ಕೆ ಕೈ ಹಾಕಿದೆವು . ನಮ್ಮ ಗುರುಗಳು ಪೂರ್ಣ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದರು. ನಾವು ಕಲಿತಿರುವ ವಿದ್ಯೆಯ ಮೂಲಕ ಈ ಯೋಜನೆ ರೂಪಿತಗೊಂಡದ್ದು ನಮಗೆಲ್ಲಾ ತುಂಬಾ ಹೆಮ್ಮೆ ಎನಿಸುತ್ತದೆ .