ಕೃಷಿ ಚಟುವಟಿಕೆಗಳನ್ನು ನಿರ್ಬಂಧಿಸದಂತೆ ಕೃಷಿಕ ಸಂಘ ಮನವಿ

ಉಡುಪಿ: ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಎಲ್ಲರಿಗೂ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ ಕೂಡಾ. ಅದಕ್ಕೆ ಕೃಷಿಕರು ಸಹ ಬದ್ಧರು. ಪ್ರಸ್ತುತ ಸರಕಾರವು ಕೃಷಿ ಚಟುವಟಿಕೆಗಳನ್ನು, ಆಹಾರ ವಸ್ತುಗಳನ್ನು ಸಾಗಾಟ ಮಾಡುವ, ಕೃಷಿ ಸಂಬಂಧಿತ ಸಾಮಾಗ್ರಿ, ಯಂತ್ರೋಪಕರಣಗಳ ಸಾಗಾಟಗಳನ್ನು ಈ ನಿರ್ಬಂಧದಿಂದ ಹೊರತುಪಡಿಸಿವೆ. ಹಾಗಿದ್ದೂ ಹಲವೆಡೆ ಪೋಲಿಸರು ಇದರ ಮಾಹಿತಿ ಕೊರತೆಯಿಂದಲೋ ಅಥವ ಇನ್ನೇನೊ ಕಾರಣಗಳಿಂದ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ತಡೆಯೊಡ್ಡುತ್ತಿದ್ದಾರೆ..

ಜಿಲ್ಲೆಯತ್ತ ಬರುತ್ತಿರುವ ಭತ್ತ ಕಟಾವು ಯಂತ್ರಗಳನ್ನು ತೀರ್ಥಹಳ್ಳಿ ಚೆಕ್ ಪೋಸ್ಟಲ್ಲಿ ತಡೆಹಿಡಿಯಲಾಗಿದೆ. ಆಗುಂಬೆ ಚೆಕ್ ಪೋಸ್ಟಲ್ಲಿ ಮೊಟ್ಟೆ ಸಾಗಿಸುತ್ತಿರುವ ಲಾರಿಯನ್ನು ತಡೆ ಹಿಡಿಯಲಾಗಿದೆ. ಹೀಗಾದರೆ ಕೃಷಿ ಚಟುವಟಿಕೆ, ಆಹಾರ ವಸ್ತು ಪೂರೈಕೆ ಕುಂಠಿತಗೊಂಡು ಬೇರೆ ರೀತಿಯ ಸಮಸ್ಯೆಗಳು ಹುಟ್ಟಿಕೊಳ್ಳಲಿವೆ. ಈಗಾಗಲೆ ಭತ್ತ ಕಟಾವು ಶುರುಮಾಡಲಾಗದೆ ಸಮಸ್ಯೆಯಾಗಿದೆ. ಎಪ್ರಿಲ್ ಮೊದಲ ಅವಧಿಯೊಳಗೆ ಕಟಾವು ಆಗದಿದ್ದರೆ ಭತ್ತ ತೆನೆಗಳು ಗದ್ದೆಯಲ್ಲಿ ಉದುರಿಹೋಗಿ ಭತ್ತ ಬೆಳೆಗಾರರಿಗೆ ಅಪಾರ ನಷ್ಟವಾಗಲಿದೆ.

ಆಹಾರ ಧಾನ್ಯ, ತರಕಾರಿ ಪೂರೈಕೆಗೂ ಹೊಡೆತ ಬೀಳಲಿದೆ. ಆಹಾರವಸ್ತುಗಳ ಕೊರತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸುವ ಅಪಾಯವಿದೆ. ತಕ್ಷಣ ಇಂತಹ ವಿಷಯಗಳಲ್ಲಿ ಗಮನಹರಿಸಿ ಸಮಸ್ಯೆಗಳನ್ನು ಪರಿಹರಿಸಿ ಕೃಷಿ ಚಟುವಟಿಕೆಗಳು ನಿರಾಂತಕವಾಗಿ ನಡೆಯಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಯವರನ್ನು ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!