ಕೋವಿಡ್-19 ತಡೆಗೆ ಲಾಕ್ಡೌನ್ ಮಾರ್ಗವಲ್ಲ, ಹೆಚ್ಚು ಜನರನ್ನು ಪರೀಕ್ಷಿಸಬೇಕು: ರಾಹುಲ್ ಗಾಂಧಿ
ನವದೆಹಲಿ: ಕೊರೋನಾ ವೈರಸ್ ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಲಾಕ್’ಡೌನ್, ವೈರಸ್’ನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ, ಕೇವಲ ನಿಯಂತ್ರಿಸಬಹುದಷ್ಟೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ.
ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಲಾಕ್’ಡೌನ್ ಸಮಸ್ಯೆಗೆ ಯಾವುದೇ ರೀತಿಯ ಪರಿಹಾರವಲ್ಲ. ಇದೊಂದು ವಿರಾಮದ ಬಟನ್ ಆಗಿದೆಯಷ್ಟೇ. ಲಾಕ್’ಡೌನ್ ನಿಂದ ಹೊರಬರುತ್ತಿದ್ದಂತೆಯೇ ಮತ್ತೆ ವೈರಸ್ ಹರಡಲು ಆರಂಭಿಸುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ನಾವು ಸಂಕಷ್ಟದ ಹಂತ ತಲುಪಿ ಬಿಟ್ಟಿದ್ದೇವೆ. ಇದೀಗ ನಾವು ತುರ್ತುಪರಿಸ್ಥಿಯಲ್ಲಿದ್ದೇವೆ. ವೈರಸ್ ವಿರುದ್ಧ ಹೋರಾಡಲು ಭಾರತ ಒಗ್ಗೂಡಬೇಕಿದೆ. ಮೊಂಡು ಸಲಕರಣೆಗಳ ಬಳಸಬಾರದು. ಯೋಜಿತ ತಂತ್ರಗಳ ಮೂಲಕ ನಾವು ಕೆಲಸ ಮಾಡಬೇಕಿದೆ. ಲಾಕ್’ಡೌನ್ ಸಮಸ್ಯೆಯನ್ನು ದೂರಾಗಿಸುವುದಿಲ್ಲ. ಕೇವಲ ಸಮಸ್ಯೆಯನ್ನು ಮುಂದೂಡುತ್ತದೆಯಷ್ಟೇ. ಕೊರೋನಾ ವಿರುದ್ಧ ಹೋರಾಡಲು ನಾವು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕೆಲಸ ಕೆಲಸ ಮಾಡಬೇಕಿದೆ. ಕೇರಳದ ವಯಾನಾಡಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಯಶಸ್ಸು ಸಾಧಿಸಲಾಗುತ್ತಿದೆ.
ಪರೀಕ್ಷೆಗಳನ್ನು ಯೋಜಿತ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಸಬೇಕಿದೆ. ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡಬೇಕಿದೆ. ರೋಗಿಗಳನ್ನು ಪತ್ತೆಹಚ್ಚುವುದರ ಜೊತೆಗೆ, ಭಾರತದ ನಕ್ಷೆ ಸಿದ್ಧಪಡಿಸಿ ವೈರಸ್ ಎಲ್ಲೆಲ್ಲಿ ಹರಡುತ್ತಿದೆ ಎಂಬುದನ್ನು ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.
ವೈರಸ್ ವಿರುದ್ಧ ಹೋರಾಟ ಮಾಡಬೇಕೆಂದರೆ, ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಬೇಕು. ನಿಮ್ಮ ಹೆಚ್ಚೆಚ್ಚು ಪರೀಕ್ಷೆ ನಡೆಸುವುದರಿಂದ ವೈರಸ್ ಮಟ್ಟ ಹಾಕಬಹುದು. ಪರೀಕ್ಷೆ ನಡೆಸುವ ಮೂಲಕ ವೈರಸ್ ಯಾವ ರೀತಿ ಪಸರುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ. ಬಳಿಕ ವೈರಸನ್ನು ತೊಡೆದುಹಾಕಲು ಹೋರಾಟ ಮಾಡಬಹುದು.