ಕೆಸರಿನಲ್ಲಿ ಮುದಗೊಂಡು ಸಂಭ್ರಮಿಸಿದ “ಕೆಸರ್ಡೇರ್ ಬಿರ್ಸೆರ್”

ಉಡುಪಿ: ಮನುಷ್ಯ ಸಂಬಂಧಗಳು ಸದಾ ಕಾಲ ಪ್ರಕೃತಿ ಸಹ್ಯವಾಗಿರಬೇಕೆಂಬ ಉದ್ದೇಶದಿಂದ ಸುಮನಸಾ ಕೊಡವೂರು ಆಯೋಜಿಸುತ್ತಿರುವ ಕೆಸರ್ಡೇರ್ ಬಿರ್ಸೆರ್, 5ನೇ ವರ್ಷದ ಕಾರ್ಯಕ್ರಮ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಕೊಡವೂರು ಸಂಕದ ಬಳಿಯ ಗದ್ದೆಯಲ್ಲಿ ನಡೆಯಿತು.

ಮಳೆಯ ಕಣ್ಣು ಮುಚ್ಚಾಲೆ ಇದ್ದಾಗ್ಯೂ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಮತ್ತು ಯುವಜನರು ಕೆಸರಿನಲ್ಲಿ ಮುದಗೊಂಡು ಸಂಭ್ರಮಿಸಿದರು. ಜಾನಪದ ಹಿನ್ನೆಲೆಯ ಆಟಗಳು ಮನೋರಂಜನೆ ಮಾತ್ರವಲ್ಲ, ಅದರಲ್ಲಿರುವ ಜೀವನಕ್ರಮದ  ಸೂಕ್ಷ್ಮತೆಯನ್ನು ನವಪೀಳಿಗೆಗೆ  ತಿಳಿಸುವುದಕ್ಕೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಕೃಷಿ ಪ್ರಧಾನವಾದ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯವಿದೆಯೆನ್ನುವ ಮಾದರಿ ಕಾರ್ಯಕ್ರಮವಾಗಿ ಕೆಸರ್ಡೇರ್ ಬಿರ್ಸೆರ್ ಆಯೋಜನೆಗೊಂಡಿತ್ತು.

ಇಂದು ನಾನಾ ಕಾರಣಗಳಿಂದ ನೈಸರ್ಗಿಕ ಹಾನಿ ಮಿತಿ ಮೀರುತ್ತಿದೆ. ಪವಿತ್ರವಾದ ಮಣ್ಣೂ ಮಾಲಿನ್ಯಗೊಳ್ಳುತ್ತಿದೆ. ಈ ಆತಂಕಕಾರಿ ಬೆಳವಣಿಗೆಗೆ ಜಾಗೃತಿಯ ಸಂಕೇತವಾಗಿ ಭೂರಮೆಗೆ ಕ್ಷೀರಧಾರೆಯೆರೆದು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ಮತ್ತು ಇತರ ಅತಿಥಿಗಣ್ಯರನ್ನು ಮುಟ್ಟಾಳೆ, ಗೆಂದಾಳೆಯ ಸೀಯಾಳ ಮತ್ತು ವಾಲೆಬೆಲ್ಲದೊಂದಿಗೆ ಸಾಂಪ್ರದಾಯಿಕವಾಗಿ ಸತ್ಕರಿಸಲಾಯಿತು. ಕೆಸರುಗದ್ದೆಗೆ ಪೂರಕವಾಗಿ 20 ವಿವಿಧ ಬಗೆಯ ಆಟೋಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಓಟ, ಹಿಮ್ಮಖ ಓಟ, ಸಂಯಾಮಿ ಓಟ, ಹಾಳೆ ಎಳೆಯುವುದು, ಕಪ್ಪೆ ಓಟ, ಉಪ್ಪಿನ ಮೂಟೆ, ಈಜುವುದು, ಕೆರೆದಡ, ರಿಂಗ್ ಓಟ, ಲಗೋರಿ, ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, ಬೆರಿಚೆಂಡ್, ಮಡಕೆ ಒಡೆಯುವುದು, ಹಗ್ಗಜಗ್ಗಾಟ ಮೊದಲಾದವುಗಳಿದ್ದವು. ತುಳುನಾಡಿನ ಶೈಲಿಯ ಗಂಜಿ, ಹುರುಳಿ ಚಟ್ನಿ, ಮಳಿವೆ ಸುಕ್ಕದ ಉಟೋಪಚಾರವಿತ್ತು.

ಎಲ್ಲೆಡೆಯೂ ಹಸಿರೇ ತುಂಬಿಕೊಳ್ಳಲಿ ಮತ್ತು ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಸೌಹಾರ್ದತೆಯ ಪುಷ್ಪ ಅರಳಿರಲೆಂದು ಬಗೆಬಗೆಯ ಹೂಗಿಡಗಳನ್ನು ಬಹುಮಾನವಾಗಿ ನೀಡಲಾಯಿತು. ನಗರೀಕರಣ,ಆಧುನೀಕರಣದ ಭರಾಟೆಯಲ್ಲಿ ಮನಸ್ಸನ್ನು ಹಗುರವಾಗಿಸಿದ ಮತ್ತು ಪರಸ್ಪರ ಅರಿತು ಸಾಗುವ  ಬದುಕಿನ ಪಾಠವನ್ನು ಒಳಗೊಂಡಿರುವ ಇಂತಹ ಕೂಟವನ್ನು ಏರ್ಪಡಿಸಿದ ಸುಮನಸಾ ಸಂಸ್ಥೆಯ ಪ್ರಯತ್ನ ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಯಿತು.

ಕಾರ್‍ಯಕ್ರಮದಲ್ಲಿ ನಗರಸಭಾ ಸದಸ್ಯ ವಿಜಯ ಕೊಡವೂರು, ಕಲ್ಯಾಣಪುರ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ದೇವಾಡಿಗ, ಉದ್ಯಮಿ ಮಧುಸೂಧನ್ ಪೈ, ಪತ್ರಕರ್ತ ಜನಾರ್ಧನ ಕೊಡವೂರು, ಪ್ರಗತಿಪರ ಕೃಷಿಕ ಸದಾನಂದ ಶೇರಿಗಾರ್, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಗೌರವಾಧ್ಯಕ್ಷ ಎಂ.ಎಸ್ ಭಟ್, ಸಂಚಾಲಕ ಭಾಸ್ಕರ ಪಾಲನ್,ಕ್ರೀಡಾ ಕಾರ್ಯದರ್ಶಿ ಹರೀಶ್ ಕಲ್ಯಾಣಪುರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!