ಕೇರಳ ಮತ್ತೊಂದು ಕಾಶ್ಮೀರವಾಗುತ್ತಿದೆ ಹೇಳಿಕೆ: ಶೋಭಾ ವಿರುದ್ಧ ಪ್ರಕರಣ ದಾಖಲು
ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ್ದ ಮಲಪ್ಪುರಂನ ಕೆಲ ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಸರಬರಾಜನ್ನು ತಡೆ ಹಿಡಿದಿದೆ ಎಂದು ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಆರೋಪಿಸಿದ್ದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲ ಸುಭಾಷ್ ಚಂದ್ರನ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೇರಳ ಪೊಲೀಸರು ಐಪಿಸಿಸೆಕ್ಷನ್ 153 (ಎ) ಅಡಿಯಲ್ಲಿ ಸಂಸದೆ ಶೋಭಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿವಾದಾತ್ಮಕ ಕಾಯ್ದೆಗೆ ಬೆಂಬಲ ನೀಡಿದ್ದಕ್ಕಾಗಿ ಕುಟ್ಟಿಪುರಂ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಹಿಂದೂ ಕುಟುಂಬಗಳಿಗೆ ನೀರಿನ ಸರಬರಾಜು ತಡೆಯಲಾಗಿದೆ ಎಂದು ಸುದ್ದಿಯೊಂದು ವ್ಯಾಪಕವಾಗಿ ಹರಡಿತ್ತು. ಇದರ ಕುರಿತು ಸಂಸದೆ ಶೋಭಾ ಜನವರಿ 22 ರಂದು ಟ್ವೀಟ್ ಮಾಡಿ “ಕೇರಳ ಮತ್ತೊಂದು ಕಾಶ್ಮೀರವಾಗುತ್ತಿದೆ” ಏಂದು ಅಭಿಪ್ರಾಯಪಟ್ಟಿದ್ದರು.
ಪ್ರಕರಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮೊದಲ ಆರೋಪಿ ಎಂದು ದಾಖಲಾಗಿದೆ.ಐಪಿಸಿಯ ಸೆಕ್ಷನ್ 153 (ಎ) ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ ಮತ್ತು ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದನ್ನು ಸೂಚಿಸುತ್ತದೆ. ನಕಲಿ ಸುದ್ದಿಯನ್ನು ಆಧರಿಸಿ ಕುಟ್ಟಿಪುರಂ ಬಗ್ಗೆ ಸಂಸದರು ಮಾಡಿದ ಟ್ವೀಟ್ ಧಾರ್ಮಿಕ ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಚಂದ್ರನ್ ದೂರಿನಲ್ಲಿ ಹೇಳಿದ್ದಾರೆ.
ಸುಮಾರು ಒಂದು ವರ್ಷದಿಂದ ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಖಾಸಗಿ ವ್ಯಕ್ತಿಯ ಬೋರ್‌ವೆಲ್‌ನಿಂದ ನಿವಾಸಿಗಳಿಗೆ ನೀರು ಒದಗಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಇಲ್ಲಿ ಕೃಷಿ ಕೆಲಸಕ್ಕಾಗಿ ನೀರಿನ ಬಳಕೆ ಮಾಡಲಾಗುತ್ತಿದೆ. ಕೇರಳ ರಾಜ್ಯ ವಿದ್ಯುತ್ ಮಂಡಳಿ ಈ ಸಂಬಂಧ ಎಚ್ಚರಿಕೆ ನೀಡಿತ್ತು. ಅವರು ಬೇರೆ ಯಾವುದಕ್ಕೂ ಮೋಟಾರ್ ಬಳಸಿದ್ದಾದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೇಳೀತ್ತು.. ಬಿಕ್ಕಟ್ಟು ಉಲ್ಬಣಗೊಂಡ ನಂತರ ಅವರು ಪಂಪ್ ಬಳಸುವುದನ್ನು ನಿಲ್ಲಿಸಿದ್ದರು ”ಎಂದು ಕುಟ್ಟಿಪುರಂ ಪೊಲೀಸ್ ಠಾಣೆಯ ಎಸ್‌ಐ ಅರವಿಂದ್ ಇಎ ಹೇಳಿದರು. ಕುಟುಂಬಗಳು ನೀರಿನಿಂದ ವಂಚಿತರಾಗಿದ್ದಾರೆ ಎಂಬ ಕಥೆಯನ್ನು ಬಲಪಂಥೀಯ ಗುಂಪಿನ ಸೇವಾಭಾರತಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಸೇವಾಭಾರತಿ ಈ ಪ್ರದೇಶದ ಕೆಲವು ಕುಟುಂಬಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಒದಗಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ