ಡಾ. ಶಿವರಾಮ ಕಾರಂತ ಪ್ರಶಸ್ತಿಗೆ ರಾಯಚೂರಿನ ಕೃಷಿ ಸಾಧಕಿ ಕವಿತಾ ಮಿಶ್ರ ಆಯ್ಕೆ

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯ್ತಿ ಹಾಗೂ ಡಾ. ಕಾರಂತ ಹುಟ್ಟೂರ ಪ್ರಶಸ್ತಿ
ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 2019ನೇ ಸಾಲಿನ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕೃಷಿ ಸಾಧಕಿ ಕವಿತಾ ಮಿಶ್ರ ಆಯ್ಕೆಯಾಗಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕೋಟ ಡಾ. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್‌, ಕಳೆದ 14 ವರ್ಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಈ ಬಾರಿ ಪರಿಸರ ವಿಭಾಗದಲ್ಲಿ ಕವಿತಾ ಮಿಶ್ರ ಅವರನ್ನು ಪ್ರಶಸ್ತಿಗೆ ಆಯ್ಕೆ
ಮಾಡಲಾಗಿದೆ. ಅದರಂತೆ ಅಕ್ಟೋಬರ್‌ 10ರಂದು ಕೋಟದ ಕಾರಂತರ ಥೀಮ್‌ ಪಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಶಿವರಾಮ ಕಾರಂತರ ಜನ್ಮ ದಿನೋತ್ಸವದ ಅಂಗವಾಗಿ ಅ. 10ರಿಂದ 19ರ ವರೆಗೆ ಹತ್ತು ದಿನಗಳ ಕಾಲ ಸಾಂಸ್ಕೃತಿಕ–ಸಾಹಿತ್ಯಿಕ ಸುಗ್ಗಿ ‘ಪುನರ್ವಸು–2019’ ಕಾರ್ಯಕ್ರಮವನ್ನು
ಆಯೋಜಿಸಲಾಗಿದೆ. ಈ ಹತ್ತು ದಿನಗಳಲ್ಲಿ ಕಾರಂತ ವಿರಾಸತ್‌, ಪ್ರತಿಭಾ ನಮನ, ಮಕ್ಕಳ
ಹಬ್ಬ, ಚಲನಚಿತ್ರ ಪ್ರದರ್ಶನ, ನಾಟಕ ಪ್ರದರ್ಶನ, ಜಾದು ಜಾತ್ರೆ, ಆನ್‌ಲೈನ್‌ ಕ್ವಿಜ್‌
ಮೊದಲಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ, ಪ್ರಶಸ್ತಿ ಆಯ್ಕೆ
ಸಮಿತಿ ಸದಸ್ಯ ಯು.ಎಸ್‌. ಶೆಣೈ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ,
ಗ್ರಾಪಂ ಪಿಡಿಒ ಶೈಲಾ ಎಸ್‌. ಪೂಜಾರಿ, ಥೀಮ್‌ ಪಾರ್ಕ್‌ ಮೇಲ್ವಿಚಾರಕ ಪ್ರಶಾಂತ್‌
ಇದ್ದರು.

Leave a Reply

Your email address will not be published. Required fields are marked *

error: Content is protected !!