ಕಟೀಲು: ಜ.22ರಿಂದ ದುರ್ಗಾಪರಮೇಶ್ವರಿ ಬ್ರಹ್ಮಕಲಶೋತ್ಸವ
ಮಂಗಳೂರು: ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾ
ನದ ಬ್ರಹ್ಮಕಲಶೋತ್ಸವ ಜ. 22ರಿಂದ ಆರಂಭಗೊಳ್ಳಲಿದ್ದು, ಭಕ್ತರ ಸಹಕಾರದಲ್ಲಿ ಭರಪೂರ ಸಿದ್ಧತೆಗಳು ಭರದಿಂದ ಸಾಗಿವೆ’ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಟೀಲಿನಲ್ಲಿ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿ, ಸ್ಥಳಕ್ಕೆ ಡಾಮರು ಹಾಕಿಸಲಾಗುತ್ತಿದೆ. ಕೆಲವೆಡೆ ಮಣ್ಣು ತೆಗೆಸಿ ಡಾಮರು ಹಾಕಿಸಲಾಗಿದೆ. ಸುಸಜ್ಜಿತ ಪಾಕಶಾಲೆ ನಿರ್ಮಾಣ ಗೊಂಡಿದೆ. ಎರಡನೇ ಹಂತದ ಯಾತ್ರಿ ನಿವಾಸ, ಇಂಟರ್‌ಲಾಕ್ ಅಳವಡಿಕೆ ಪೂರ್ಣಗೊಂಡಿದೆ. ₹50 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ, ದೇವಸ್ಥಾನಕ್ಕೆ ಹೋಗಲು ಸ್ಟೀಲ್ ಸೇತುವೆ, ಆನೆಲಾಯ, ಹೂತೋಟ, ರಥದ ಕೊಟ್ಟಿಗೆ, ಸ್ವರ್ಣಲೇಪಿತ ಧ್ವಜಸ್ತಂಭದ ನಿರ್ಮಾಣ, 36 ಕೊಠಡಿಗಳ ಭ್ರಾಮರಿ ವಸತಿಗೃಹ ನಿರ್ಮಿಸಲಾಗಿದೆ’ ಎಂದು ವಿವರ ನೀಡಿದರು.
ಅನ್ನ ಪ್ರಸಾದ: ‘ಐದು ಸಾವಿರ ಮಂದಿಗೆ ಏಕಕಾಲದಲ್ಲಿ ಊಟೋಪಚಾರ, ನೀರಿನ ವ್ಯವಸ್ಥೆ, ಸ್ವಸಹಾಯ ಪದ್ಧತಿ (ಬಫೆ) ಮಾಡಲಾಗಿದೆ. ಬೆಳಿಗ್ಗೆ 6.30ರಿಂದ 11.30ರ ವರೆಗೆ ಉಪಹಾರ, ಬಳಿಕ 3.30ರ ನತಕ ಅನ್ನ ಪ‍್ರಸಾದ, ಸಂಜೆ 4ರಿಂದ 6ರ ತನಕ ಲಘು ಉಪಹಾರ ಹಾಗೂ ರಾತ್ರಿ 7ರಿಂದ 12ರ ತನಕ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ’ ಎಂದರು.
ವೇದಿಕೆ: ಸಭಾ, ಸಾಂಸ್ಕೃತಿಕ ಹಾಗೂ ಇತರ ಕಾರ್ಯಕ್ರಮಗಳಿಗಾಗಿ ವಿಶಾಲವಾದ ವೇದಿಕೆ ನಿರ್ಮಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಮಾತ್ರವಲ್ಲ, ಬೆಂಗಳೂರು, ದಾವಣಗೆರೆ ಮತ್ತಿತರ ಜಿಲ್ಲೆಗಳಿಂದಲೂ ಹೊರಕಾಣಿಕೆ ಬರಲಿದ್ದು, ಸ್ವೀಕಾರಕ್ಕೆ ತಗಡಿನ ಚಪ್ಪರ ನಿರ್ಮಾಣ ಮಾಡಲಾಗಿದೆ.
ಪಾರ್ಕಿಂಗ್: 19 ಕಡೆಗಳಲ್ಲಿ ಸುಮಾರು 40 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮೂಲಸೌಕರ್ಯ ಕಲ್ಪಿಸಲಾಗಿದೆ. ಸುಮಾರು 5 ಸಾವಿರ ವಾಹನಗಳನ್ನು ನಿಲ್ಲಿಸಬಹುದು. ರಸ್ತೆಗಳನ್ನೂ ಅಗಲ ಮಾಡಲಾಗುತ್ತಿದೆ. ಎಲ್ಲರಿಗೂ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿದ್ದು, ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಭೂ ನಿಧಿ: ಕಟೀಲಿನಲ್ಲಿ ಬಹುಮಳಿಗೆ ಪಾರ್ಕಿಂಗ್ ವ್ಯವಸ್ಥೆ, ಯಾತ್ರೀ ನಿವಾಸ, ಸಭಾಂಗಣ, ಕಾರ್ಯಾಲಯ ಕಟ್ಟಡ, ಭೋಜನ ಶಾಲೆಗಳ ನಿರ್ಮಾಣದ ಗುರಿ ಇದೆ. ಅಲ್ಲದೇ, ಇಲ್ಲಿ ಭೂಮಿ ಕೊರತೆ ಇದ್ದು, ಭೂ ನಿಧಿಯನ್ನು ಸ್ಥಾಪಿಸಲಾಗಿದೆ. ಆ ಮೂಲಕ ದೇಣಿಗೆ ನೀಡುವುದು ಅಥವಾ ಭೂಮಿಯನ್ನು ಖರೀದಿಸಿ ದೇವಸ್ಥಾನಕ್ಕೆ ಭಕ್ತರು ನೀಡಬಹುದಾಗಿದೆ ಎಂದು ಆನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ಮನವಿ ಮಾಡಿದರು.
ಕಾರ್ಯಕ್ರಮಗಳು: ‘4ರಂದು ಸುವರ್ಣಧ್ವಜ ಪ್ರತಿಷ್ಠೆ, 30ರಂದು ಬ್ರಹ್ಮಕಲಶೋತ್ಸವ, ಫೆಬ್ರುವರಿ 1ರಂದು ನಾಗಮಂಡಲ, ಫೆಬ್ರುವರಿ 2ರಂದು ಕೋಟಿಜಪ ಯಜ್ಞ ಹಾಗೂ ಫೆಬ್ರುವರಿ 3ರಂದು ಸಹಸ್ರ ಚಂಡಿಕಾಯಾಗಗಳು ಪ್ರಮುಖ ಧಾರ್ಮಿಕ ವಿಧಿವಿಧಾನಗಳಾಗಿವೆ’ ಎಂದರು.
ಇದೇ 22ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆಯ ಸಮಾರಂಭದಲ್ಲಿ ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ. ಅಂದಿನಿಂದ 31ರ ತನಕ ಪ್ರತಿದಿನ ಸಂಜೆ 5ಕ್ಕೆ ಧಾರ್ಮಿಕ ಸಭೆಗಳು ನಡೆಯಲಿದ್ದು, 24ರಂದು ಸುವರ್ಣ ಧ್ವಜ ಪ್ರತಿಷ್ಠೆ ಮತ್ತು 30ರಂದು ಬ್ರಹ್ಮಕಲಶಾಭಿಷೇಕವು ನೆರವೇರಲಿವೆ.
ಇದೇ 30ರ ಬ್ರಹ್ಮಕಲಶಾಭಿಷೇಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಟಿ ಶಿಲ್ಪಾ ಶೆಟ್ಟಿ, ಸಮಿತಿ ಅಧ್ಯಕ್ಷರೂ ಆಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತಿತರ ಪ್ರಮುಖರು ಪಾಲ್ಗೊಳ್ಳುವರು. ಪ್ರತಿನಿತ್ಯ ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
‘ಕಟೀಲಿನ ಅಜಾರಿನಿಂದ ಗಿಡಿಗೆರೆಯವರೆಗೆ, ಮಾಂಜದ ಪಾರ್ಕಿಂಗ್ ಜಾಗದಲ್ಲಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಮಳಿಗೆಯನ್ನು ಧಾರ್ಮಿಕ ದತ್ತಿ ನಿಧಿ ಕಾಯ್ದೆ ಪ್ರಕಾರವೇ ದೇವಸ್ಥಾನಕ್ಕೆ ಸೇರಿದ ಭಕ್ತ ವರ್ಗಕ್ಕೆ ಮಾತ್ರ ನೀಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ವಾಸುದೇವ ಆಸ್ರಣ್ಣ ಉತ್ತರಿಸಿದರು.
ಮೂಲಸ್ಥಾನವಾದ ಕುದುರುವಿನಲ್ಲಿ ಭ್ರಾಮರೀವನ ಅಭಿವೃದ್ಧಿ ಪಡಿಸಲಾಗುವುದು. ಅಲ್ಲಿ ನಾಗಮಂಡಲ, ಕೋಟಿಜಪಯಜ್ಞ, ಸಹಸ್ರ
ಚಂಡಿಕಾ ಯಾಗ ನಡೆಯಲಿದ್ದು, ಯಾಗ ಮಂಟಪ ಸಿದ್ಧವಾಗಿದೆ. ಅಲ್ಲಿಯೇ ನಕ್ಷತ್ರವನ, ನವಗ್ರಹವನ ನಿರ್ಮಿಸಲಾಗುವುದು. ಒಂದು ತಿಂಗಳು ನಡೆಯಲಿರುವ ಭಜನೆ ಫೆ.4ರ ತನಕ ಮುಂದುವರಿಯಲಿದೆ. ಕೋಟಿ ಜಪ ಯಜ್ಞದಲ್ಲಿ 10 ಸಾವಿರ ಭಕ್ತರಿಗೆ ಜಪಯಜ್ಞ ದೀಕ್ಷೆ ನೀಡಿದ್ದು, ಫೆ.2ರಂದು ಜಪಸಮರ್ಪಣೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ವಾಸುದೇವ ಆಸ್ರಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು, ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಡಾ.ಆಶಾಜ್ಯೋತಿ ರೈ ಇದ್ದರು.