ನಾಳೆಯಿಂದ ಮಾ. 31ರ ವರೆಗೆ ಕರ್ನಾಟಕ ಸಂಪೂರ್ಣ ಲಾಕ್ ಡೌನ್: ಯಡಿಯೂರಪ್ಪ
ಬೆಂಗಳೂರು: (ಉಡುಪಿ ಟೈಮ್ಸ್ ವರದಿ) ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಕರ್ನಾಟಕ ಸರ್ಕಾರ ಮಂಗಳವಾರದಿಂದ ಮಾರ್ಚ್ 31ರ ವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಿಷೇಧಾಜ್ಞೆ ಜಾರಿಗೊಳಿಸಿದೆ.
ಎಲ್ಲಾ ಜಿಲ್ಲೆಗಳಲ್ಲೂ ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಮತ್ತು ಅದನ್ನು ಅನುಸರಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಹಾಲು, ಆಹಾರ ಮತ್ತು ತರಕಾರಿ ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ವಾಣಿಜ್ಯ ಸೇವೆಗಳು, ವಾಣಿಜ್ಯ ಮಳಿಗೆಗಳು, ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.
ಜಿಲ್ಲಾಡಳಿತ, ಪೊಲೀಸ್, ಅಗ್ನಿ ಶಾಮಕ, ರಕ್ಷಣಾ ಸಿಬ್ಬಂದಿ, ಜೈಲು ಸಿಬ್ಬಂದಿ ಮತ್ತು ಸಾರ್ವಜನಿಕ ಆರೋಗ್ಯ ಸಿಬ್ಬಂದಿ ಹೊರತುಪಡಿಸಿ ಇತರೆ ಸರ್ಕಾರಿ ಕಚೇರಿಗಳು ಬಂದ್ ಆಗಲಿವೆ.
ಖಾಸಗಿ ಕಂಪನಿಗಳ ನೌಕರರಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದ್ದು, ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ತುರ್ತು ಸೇವೆ ಹೊರತುಪಡಿಸಿ ಇತರೆ ಯಾವುದೇ ಖಾಸಗಿ ಅಥವಾ ಸರ್ಕಾರಿ ಸಾರಿಗೆ ಸೇವೆ ಇರುವುದಿಲ್ಲ. ಆಟೋ, ಟ್ಯಾಕ್ಸಿಗಳು ರಸ್ತೆಗಿಳಿಯುವಂತಿಲ್ಲ ಎಂದು ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.