ಕಾರ್ಕಳ: ಚಿನ್ನಕ್ಕಾಗಿ ಮಹಿಳೆಯ ಕೊಲೆ, ಇಬ್ಬರು ಹಂತಕರ ಬಂಧನ
ಕಾರ್ಕಳ: ಕಳೆದ ಶುಕ್ರವಾರ ಕಾರ್ಕಳ ತಾಲೂಕು ಬೆಳ್ಮಣ್ಣಿನ ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯ ಶವ ಕಲ್ಯಾ ತಾಲೂಕಿನ ಬಾವಿಯಲ್ಲಿ ಭಾನುವಾರ ಸಂಜೆ ಪತ್ತೆಯಾಗಿದೆ. ಬೆಳ್ಮಣ್ಣು ನಿವಾಸಿ ಭರತಲಕ್ಷ್ಮೀ ಉಡುಪ(68) ಎಂಬವರನ್ನು ಅವರ ಪರಿಚಯದ ಇಬ್ಬರು ದುಷ್ಕರ್ಮಿಗಳು ಹತ್ಯೆಗೈದು ಬಳಿಕ ಅವರ ಮೈಯಲ್ಲಿದ್ದ ಚಿನ್ನಾಭರಣ ಕದ್ದು ಮೃತದೇಹವನ್ನು ಕಲ್ಯಾ ಗ್ರಾಮದಮೂಡುಮನೆ ಶಕುಂತಲಾ ಎಂಬವರ ತೋಟದ ಬಾವಿಗೆ ಎಸೆದು ಪರಾರಿಯಾಗಿದ್ದಾರೆ.
ಚಿನ್ನಕ್ಕಾಗಿ ಮಹಿಳೆಯನ್ನು ಅಮಾನುಷವಾಗಿ ಹತ್ಯೆಗೈದ ಕಾಪು ತಾಲೂಕಿನ ಸಾಂತೂರುಕೊಪ್ಲ ನಿವಾಸಿ ರೊನಾಲ್ಡ್ ಬರ್ಬೋಜಾ(45) ಹಾಗೂ ಶಿರ್ವ ಮಂಚಕಲ್ ಹಳೆ ಇಗರ್ಜಿ ಬಳಿ ನಿವಾಸಿ ಸ್ಟೀವನ್ ಡಯಾಸ್ (22) ಎಂಬವರನ್ನು ಕಾರ್ಕಳ ಗ್ರಾಮಾಂತರ ಠಾಣಾ ಎಸ್‌ಐ ನಾಸಿರ್ ಹುಸೇನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಘಟನೆ ವಿವರ:
ಕೊಲೆಯಾದ ಭರತಲಕ್ಷ್ಮೀ ಉಡುಪರವರು ತನ್ನ ಮಗನಾದ ಶ್ರೀನಾಥ ಉಡುಪ ಅವರೊಂದಿಗೆ ಬೆಳ್ಮಣ್ಣಿನಲ್ಲಿ ವಾಸವಿದ್ದು, ಶ್ರೀನಾಥ ಉಡುಪರವರು ಉಡುಪಿಯ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ನೌಕರನಾಗಿದ್ದಾರೆ. ಅವರು ಪ್ರತಿನಿತ್ಯ ಬೆಳ್ಮಣ್ಣಿನಿಂದ ಕಚೇರಿಗೆ ಹೋದವರು ಸಂಜೆ ಮನೆಗೆ ಬರುತ್ತಿದ್ದು, ಡಿಸೆಂಬರ್ ೨೦ರಂದು ಕಚೇರಿಯಿಂದ ಬರುವಾಗ ರಾತ್ರಿ ೮ ಗಂಟೆಯಾಗಿತ್ತು, ಮನೆಗೆ ಬಂದಾಗ ತಾಯಿ ಮನೆಯಲ್ಲಿ ಇಲ್ಲದ ಹಿನ್ನಲೆಯಲ್ಲಿ ಸಾಕಷ್ಟು ಹುಡುಕಾಡಿದರೂ ಅವರ ಪತ್ತೆಯಾಗದ್ದರಿಂದ ಕಾರ್ಕಳ ಪೊಲೀಸರಿಗೆ ದೂರು ನೀಡಿದ್ದರು. ನಾಪತ್ತೆಯಾದ ಕೇವಲ ೨ ದಿನಗಳೊಳಗೆ ಭರತಲಕ್ಷ್ಮೀ ಉಡುಪ ಅವರ ಮೃತದೇಹ ಕಲ್ಯಾದ ಮೂಡುಮನೆ ಶಕುಂತಳಾ ಎಂಬವರ ತೋಟದ ಬಾವಿಯಲ್ಲಿ ಪತ್ತೆಯಾಗಿದೆ.
ಶವ ಪತ್ತೆಯಾದ ತೋಟದ ಮಾಲೀಕರು ಬೇರಡೆ ವಾಸ್ತವ್ಯವಿದ್ದು ಅಪರೂಪಕ್ಕೆ ತೋಟವನ್ನು ನೋಡಿಕೊಳ್ಳಲು ಬರುತ್ತಿದ್ದರು. ಭಾನುವಾರ ರಾಜಾದಿನವಾಗಿದ್ದರಿಂದ ಸಂಜೆ ೬ ಗಂಟೆಗೆ ತೋಟಕ್ಕೆ ನೀರು ಬಿಡಲೆಂದು ಮನೆಯರು ತೋಟದ ಬಾವಿಯತ್ತ ಬಂದಾಗ ಬಾವಿಯಲ್ಲಿ ಶವ ತೇಲುತ್ತಿದ್ದ ಹಿನ್ನಲೆಯಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಶವ ಮೇಲಕ್ಕೆತ್ತಿ ಪರಿಶೀಲಿಸಿದಾಗ ನಾಪತ್ತೆಯಾಗಿದ್ದ ಭರತಲಕ್ಷ್ಮೀ ಉಡುಪರವರ ಶವವಾಗಿತ್ತು. ಶವದ ಮೈಮೇಲಿನ ಆಭರಣ ಹಾಗೂ ಮನೆಯಲ್ಲಿದ್ದ ಆಭರಣಗಳು ಕಳುವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಂಕಾಸ್ಪದ ವ್ಯಕ್ತಿಗಳಾದ ಸ್ಟೀವನ್ ಡಯಾಸ್ ಹಾಗೂ ರೊನಾಲ್ಡ್ ಬರ್ಬೋಜಾ ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯ ಬಯಲಾಗಿದೆ.
ಪರಿಚಯಸ್ಥರಿಂದಲೇ ಕೃತ್ಯ:
ಭರತಲಕ್ಷ್ಮೀ ಉಡುಪ ಅವರನ್ನು ಚಿನ್ನಾಭರಣಕ್ಕಾಗಿ ಅವರ ಪರಿಚಯಸ್ಥರೇ ಕೊಲೆಗೈದು ಶವ ಬಾವಿಗೆಸೆದಿರುವುದು ನಿಜಕ್ಕೂ ವಿಪರ್ಯಾಸ. ಮಗ ಶ್ರೀನಾಥ್ ಉಡುಪರವರು ನಿತ್ಯ ಕಚೇರಿಗೆಂದು ತೆರಳಿದ ಬಳಿಕ ತಾಯಿ ಭರತಲಕ್ಷ್ಮೀ ಮನೆಯಲ್ಲಿ ಒಬ್ಬರೇ ಇರುವುದನ್ನು ತಿಳಿದಿದ್ದ ರೊನಾಲ್ಡ್ ಬರ್ಬೋಜಾ ಹಾಗೂ ಸ್ಟೀವನ್ ಡಯಾಸ್ ಶುಕ್ರವಾರ ಬೆಳಗ್ಗೆ ಏಕಾಎಕಿ ಮನೆಗೆ ನುಗ್ಗಿ ವೃದ್ದ ಭರತಲಕ್ಷ್ಮೀ ಅವರ ಕುತ್ತಿಗೆ ಹಿಸುಕಿ ಅವರು ಕೊಲೆಗೈದ ಬಳಿಕ ಸುಮಾರು 2.25 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಕಾರಿನಲ್ಲಿ ಅವರ ಶವವನ್ನು ಕಲ್ಯಾ ಗ್ರಾಮದ ತೋಟದ ಬಾವಿಗೆಸೆದಿರುವುದಾಗಿ ಪೊಲೀಸರ ತನಿಖೆಯಲ್ಲಿ ಬಾಯಿಬಿಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.