ಕಾರ್ಕಳ: ಜ.21 ರಂದು ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನೆ
ಕಾರ್ಕಳ : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿಯ ನೀತಿ ನಿಯಮಾವಳಿಗಳು ಸಂವಿಧಾನ ವಿರೋಧಿಯಾಗಿದೆ. ಈ ಕಾಯಿದೆ ತಿದ್ದಪಡಿಯಿಂದ ಅಂಬೇಡ್ಕರ್ ನಿರೂಪಿಸಿರುವ ಸಂವಿಧಾನದ ಹೃದಯ ಭಾಗವಾಗಿರುವ ಆರ್ಟಿಕಲ್ 14 ಮತ್ತು 21 ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರಪಾಲ್ ಹೇಳಿದರು.
ಅವರು ಶನಿವಾರ ಕಿಸಾನ್ ಸಭಾದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜ.21 ಮಂಗಳವಾರ ಮಧ್ಯಾಹ್ನ ಪೌರತ್ವ ತಿದ್ದಪಡಿ ಕಾಯಿದೆ ಹಾಗೂ ಎನ್‌ಆರ್‌ಸಿ ಜಾರಿ ವಿರೋಧಿಸಿ ಕಾರ್ಕಳದ ಬಂಡೀಮಠ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ಮತ್ತು ಜಾಥಾ ನಡೆಯಲಿದ್ದು, ಈ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಈ ದೇಶದ ಪ್ರಜಾತಂತ್ರದ ಜೀವಾಳವಾಗಿರುವ ಮನುಷ್ಯನ ಬದುಕುವ ಹಕ್ಕು ಮತ್ತು ವಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಪೌರತ್ವ ತಿದ್ದುಪಡಿ ಮಸೂದೆಯ ಕೆಲವೊಂದು ಪ್ರಸ್ತಾವನೆಗಳು ಧರ್ಮದ ತಳಹದಿಯ ಮೇಲೆ ನಿಂತಿದ್ದು, ಈ ಮಸೂದೆಯ ಯತಾರ್ಥದ ಬಗ್ಗೆ ಜನರಲ್ಲಿ ಸಂಶಯವಿದೆ. ಇದು ಸಂವಿಧಾನದ ಧರ್ಮನಿರಾಪೇಕ್ಷತೆಯ ವಿರುದ್ಧವಾಗಿದೆ ಇದರಿಂದ ದೇಶದ ಆಂತರಿಕ ಸೌಹಾರ್ದತೆಗೆ ಧಕ್ಕೆಯುಂಟಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂ ಹೊರತುಪಡಿಸಿ ಬೇರೆ ರಾಜ್ಯದಲ್ಲಿ ಎನ್.ಆರ್.ಸಿ ಯನ್ನು ಜಾರಿಗೆ ತರುವುದಿಲ್ಲ ಎನ್ನುತ್ತಾರೆ. ಆದರೆ ಗೃಹಮಂತ್ರಿ ಅಮಿತ್ ಶಾ ಅವರು ಅಸ್ಸಾಂನಲ್ಲಿಯೂ ಎನ್.ಆರ್.ಸಿ ಯನ್ನು ಜಾರಿಗೆ ತರುತ್ತೇವೆ ಎನ್ನುತ್ತಿದ್ದು ಇವರಲ್ಲಿ ಸ್ಪಷ್ಟತೆಯಿಲ್ಲ ಎಂದರು. ಒಟ್ಟಿನಲ್ಲಿ ಸಂವಿಧಾನ ರಕ್ಷಣೆ ಈ ದೇಶದ ಪ್ರತಿಯೊಬ್ಬನ ನಾಗರಿಕ ಕರ್ತವ್ಯ ಈ ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.