ಕಾರ್ಕಳ: ಎಸ್‌ಎಸ್‌ಎಲ್‌ಸಿ ಶೇ.100 ಫಲಿತಾಂಶಕ್ಕಾಗಿ “ಮಿಶನ್ 100”: ಸುನಿಲ್‌ಕುಮಾರ್
ಕಾರ್ಕಳ: ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕೆನ್ನುವ ನಿಟ್ಟಿನಲ್ಲಿ ಕಳೆದ ಶೈಕ್ಷಣಿಕ ವರ್ಷದಿಂದಲೇ “ಮಿಶನ್ 100” ಎನ್ನುವ ವಿನೂತನ ಯೋಜನೆಯನ್ನು ಕಾರ್ಕಳ ಶಾಸಕರಾದ ಸುನಿಲ್‌ಕುಮಾರ್ ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವೆಂಬಂತೆ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸುವ ಕುರಿತು ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಜನವರಿ 27 ರಂದು ಮುಂಜಾನೆ ಆಯ್ದ 500 ವಿದ್ಯಾರ್ಥಿಗಳ ಮನೆಗೆ ಗಣ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳ ತಂಡದೊಂದಿಗೆ ಮನೆ-ಮನ ಭೇಟಿ ಎನ್ನುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಶಾಸಕ ಸುನಿಲ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ವಿವರಿಸಿ, ಕಾರ್ಕಳ ತಾಲೂಕಿನ 54 ವಿದ್ಯಾ ಸಂಸ್ಥೆಗಳಲ್ಲಿ ಒಟ್ಟು 2657 ವಿದ್ಯಾರ್ಥಿಗಳು ಈ ಬಾರಿಯ 10 ನೇ ತರಗತಿ ಪರೀಕ್ಷೆ ಬರೆಯಲಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಲೇಬೇಕೆನ್ನುವ ನಿಟ್ಟಿನಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕೆಂದು ಈ ಮನೆ-ಮನ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜ 27 ರಂದು ಬೆಳಗ್ಗೆ 5 ರಿಂದ6.30 ರೊಳಗೆ ಈ ಅಭಿಯಾನ ನಡೆಯಲಿದ್ದು 500 ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರೊಂದಿಗೆ ಕನಿಷ್ಠ 15 ನಿಮಿಷ ಚರ್ಚಿಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು. ಈಗಾಗಲೇ ಜಿಲ್ಲಾಧಿಕಾರಿ, ಎಸ್‌ಪಿ, ಜಿ.ಪಂ ಸಿಇಓ, ಡಿಡಿಪಿಐ ಹಾಗೂ ಮಾಜಿ ಶಾಸಕ ಕ್ಯಾ.ಗಣೇಶ್ ಕಾರ್ಣಿಕ್ ಸೇರಿದಂತೆ ಸುಮಾರು 100 ಜನ ಗಣ್ಯರ ತಂಡವನ್ನು ಈ ಅಭಿಯಾನಕ್ಕಾಗಿ ಸಜ್ಜುಗೊಳಿಸಲಾಗಿದ್ದು ತಲಾ 1 ತಂಡ 1.30 ಗಂಟೆಯಲ್ಲಿ 5 ಮನೆಗಳಿಗೆ ಭೇಟಿನೀಡಿ ಮಕ್ಕಳಿಗೆ ಪರೀಕ್ಷಾ ಸಿದ್ಧತೆ ಹಾಗೂ ಧೈರ್ಯ ತುಂಬುವ ಕೆಲಸ ಮಾಡಲಿದ್ದಾರೆ ಎಂದರು.
ಜನವರಿ ತಿಂಗಳಿನಿಂದ ತಾಲೂಕಿನ 6 ಕಡೆಗಳಲ್ಲಿ ರಾತ್ರಿ 7ರಿಂದ 10 ರವರೆಗೆ ಹೆಚ್ಚುವರಿ ರಾತ್ರಿ ಶಾಲೆಗಳನ್ನು ನಡೆಸಲಾಗುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಲೇಬೇಕೆನ್ನುವ ಉದ್ದೇಶದಿಂದ ಫಲಿತಾಂಶವನ್ನು 600 ಪ್ಲಸ್,600 ಹಾಗೂ ಉತ್ತೀರ್ಣ ಶ್ರೇಣಿಯ ಗುರಿ ಹೊಂದಲಾಗಿದೆ ಎಂದರು.