ಕಾರ್ಕಳ: ಅತ್ತೂರು ಸಾಂತ್‌ಮಾರಿ ಪೂರ್ವಭಾವಿ ಸಭೆ
ಕಾರ್ಕಳ : ಸಂತಲಾರೆನ್ಸ್ ಬಸಿಲಿಕ ಅತ್ತೂರು ವಾರ್ಷಿಕ ಮಹೋತ್ಸವವು ಜನವರಿ 26 ರಿಂದ ಐದು ದಿನಗಳ ಕಾಲ ನಡೆಯಲಿದ್ದು ಚರ್ಚ್ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಬಸಿಲಿಕಾ ನಿರ್ದೇಶಕ, ಧರ್ಮ ಕೇಂದ್ರದ ಪ್ರಧಾನ ಗುರು ವಂದನೀಯ ಜಾರ್ಜ್ ಡಿಸೋಜಾ ಹೇಳಿದರು.
ಅವರು ಸೋಮವಾರ ಸಂತ ಲಾರೆನ್ಸ್ ಬಸಿಲಿಕ ಅತ್ತೂರು ಮಹೋತ್ಸವದ ಪ್ರಯುಕ್ತ ನಿಟ್ಟೆ ಪಂಚಾಯತ್ ಹಾಗೂ ಚರ್ಚ್ ವತಿಯಿಂದ ಹಮ್ಮಿಕೊಂಡ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ, ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಜಾತ್ರಾ ಮಹೋತ್ಸವಕ್ಕೆ ಸುಮಾರು ಹತ್ತು ಲಕ್ಷ ಭಕ್ತಾದಿಗಳು ಭಾಗವಹಿಸಲಿದ್ದು, ೫೦೦ಕ್ಕೂ ಅಧಿಕ ಬೀದಿ ವ್ಯಾಪಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ಶೌಚಾಲಯ ವ್ಯವಸ್ಥೆಯನ್ನು ನಿರ್ಮಿಸಬೇಕಾಗಿದೆ. ಇದಕ್ಕೆ ಪಂಚಾಯತ್ ಸಹಕಾರ ಅಗತ್ಯ.
ಚರ್ಚ್ ವತಿಯಿಂದ ಆವರಣದೊಳಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ತುರ್ತು ವೈದ್ಯಕೀಯ ಚಿಕಿತ್ಸೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು. ಗಣ್ಯರು ಆಗಮಿಸುವ ವಿಐಪಿ ರಸ್ತೆಯಲ್ಲಿ ದಾರಿ ದೀಪ ಹಾಗೂ ರಸ್ತೆಯ ಎರಡು ಭಾಗದಲ್ಲಿ ದಾರಿ ದೀಪ ಅಳವಡಿಕೆ, ಹೋಟೆಲ್‌ಗಳಿಗೆ ಪರವಾನಿಗೆ ನೀಡುವ ವೇಳೆ ಅಹಾರದ ಗುಣಮಟ್ಟ ಹಾಗೂ ಗ್ಯಾಸ್ ಬೆಂಕಿ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸುವಂತೆ, ಪಾಕಿಂಗ್ ಹಾಗೂ ಮನೆಗಳಿಗೆ ತೆರಳುವ ದಾರಿ ಮಧ್ಯೆ ಅಂಗಡಿ ಮಳಿಗೆ ಅವಕಾಶ ನೀಡದಂತೆ ಸಲಹೆ ನೀಡಿದರು.
ಇದೇ ಸಂದರ್ಭ ಅರೋಗ್ಯಾಧಿಕಾರಿ ಮಾತನಾಡಿ, ತುರ್ತು ಚಿಕಿತ್ಸೆ ನೀಡಲು ಎರಡು ಸ್ಟಾಲ್‌ನ ಅವಶ್ಯಕತೆ ಇದೆ. ಜೊತೆಗೆ ಸಿಬ್ಬಂದಿ ವಾಹನ ನಿಲುಗಡೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಅರೋಗ್ಯ ದೃಷ್ಟಿಯಿಂದ ಅಹಾರವನ್ನು ತೆರದಿಟ್ಟು ಮಾರಾಟ ಮಾಡಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೆಸ್ಕಾಂ ಇಲಾಖಾಧಿಕಾರಿ ನಾರಾಯಣ್ ನಾಯ್ಕ್ ಮಾತನಾಡಿ, ಇಲಾಖೆಯಿಂದ ಸರ್ವ ರೀತಿಯ ಸಹಕಾರ ನೀಡಲಿದ್ದು, ಟ್ರಾನ್ಸ್‌ಫಾರ್ಮರ್, ಹೈ ಟೆನ್ಷನ್ ವಿದ್ಯುತ್ ಲೈನ್ ಕೆಳಭಾಗ ಅಂಗಡಿ ನಿರ್ಮಾಣಕ್ಕೆ ಅವಕಾಶವಿಲ್ಲ. ಅದ್ದರಿಂದ ಅಂತಹ ಪ್ರದೇಶಗಳಲ್ಲಿ ಸ್ಟಾಲ್ ನಿರ್ಮಿಸದಂತೆ ಸೂಚಿಸಿದ್ದಾರೆ. ಅಬಕಾರಿ ಇಲಾಖೆಯಿಂದ ನಿಗಾ ವಹಿಸಲಾಗುದು ಎಂದರು.
ವೃತ್ತನಿರೀಕ್ಷಕ ಸಂಪತ್ ಕುಮಾರ್ ಮಾತನಾಡಿ, ಯಾವುದೇ ಅಹಿತಕರ ಘಟನೆ ನಡೆದಂತೆ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಕರ್ತವ್ಯ ನಿರ್ವಹಿಸಲಿದ್ದೇವೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಎಲ್ಲರ ಚಲನವಲನಗಳನ್ನು ಗಮನಿಸಲಾಗುದು ಎಂದರು.
ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ನಿಟ್ಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸಬಿತಾ ಪೂಜಾರ್ತಿ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಪಂ ಉಪಾಧ್ಯಕ್ಷ ಗೋಪಾಲ ಶೆಟ್ಟಿ, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ವೈಧ್ಯಾಕಾರಿ ಡಾ. ರಾಜಗೋಪಾಲ ಭಂಡಾರಿ, ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಎ, ಅಗ್ನಿಶಾಮಕ ಠಾಣಾಕಾರಿ ಬಿ.ಎಮ್ ಸಂಜೀವ, ಕೇಮಾರು ವಿದ್ಯುತ್ ಸ್ಥಾವರ ಸಹಾಯಕ ಇಂಜಿನಿಯರ್ ಪೂಜನ ಎನ್, ಮೆಸ್ಕಂ ಇಲಾಖೆಯ ಸಹಾಯಕ ಇಂಜಿನಿಯರ್ ಹೇಮಂತ್, ನಿಟ್ಟೆ ಗ್ರಾಮಕರಣಿಕ ಆನಂದ್.ಬಿ, ಆರೋಗ್ಯ ಇಲಾಖೆಯ ಅಕಾರಿ ಡಾ.ಹರೀಶ್ ಆಚಾರ್ಯ, ಸಹಾಯಕ ಧರ್ಮಗುರು ವಂ.ಮೆಲ್ವಿಲ್ ರೋಯ್ ಲೋಬೊ ನಿಟ್ಟೆ ಪಂಚಾಯತ್ ಪಿಡಿಒ ಶೇಖರ್ ಉಪಸ್ಥಿತರಿದ್ದರು.