ಕಾರ್ಕಳ: ಪ್ರವಾಸಿ ಬಸ್ಸು ಬಂಡೆಗೆ ಡಿಕ್ಕಿ 9ಮಂದಿ ಸ್ಥಳದಲ್ಲೇ ಸಾವು, 25 ಜನರಿಗೆ ಗಾಯ
ಕಾರ್ಕಳ : ಕಾರ್ಕಳ ತಾಲೂಕಿನ ಮಾಳ ಘಾಟ್‌ನ ಎಸ್‌ಕೆ ಬಾರ್ಡರ್‌ನ ಮುಳ್ಳೂರು ಚೆಕ್‌ಪೋಸ್ಟ್ ಬಳಿಯ ಅಬ್ಬಾಸ್ ಕಟ್ಟಿಂಗೇರಿ ಎಂಬಲ್ಲಿನ ತಿರುವಿನಲ್ಲಿ ಟೂರಿಸ್ಟ್ ಬಸ್ ಬಂಡೆಗೆ ಅಪ್ಪಳಿಸಿದ ಪರಿಣಾಮ ಭೀಕರ ಅಪಘಾತ ನಡೆದಿದ್ದು ಬಸ್‌ನಲ್ಲಿದ್ದ 9 ಮಂದಿ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಸುಮಾರು 25 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. .
ಮೈಸೂರಿನಿಂದ ಹೊರಟ ಬಸ್ಸು ಕಳಸ ಕಾರ್ಕಳ ಮಾರ್ಗವಾಗಿ ಉಡುಪಿಗೆ ಹೋಗುತ್ತಿದ್ದ ಡಿ.ಬಿ ಟ್ರಾವೆಲ್ಸ್ ಹೆಸರಿನ ಖಾಸಗಿ ಟೂರಿಸ್ಟ್ ಬಸ್ ಶನಿವಾರ ಸಂಜೆ 5.35 ರ ವೇಳೆಗೆ ಮಾಳ ಎಸ್‌ಕೆ ಬಾರ್ಡರ್‌ನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಗಾತ್ರದ ಬಂಡೆಗೆ ಡಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಬಸ್‌ನಲ್ಲಿದ್ದ ಮೂವರು ಚಾಲಕರು, ಇಬ್ಬರು ಅಡುಗೆಯವರು ಹಾಗೂ ನಾಲ್ವರು ಕಂಪೆನಿಯ ನೌಕರರು ಸೇರಿ 9 ಜನ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು23 ಕ್ಕೂ ಅಧಿಕ ಮಂದಿಗೆ ಗಂಭೀರ ಹಾಗೂ ಸಾಧಾರಣ ಗಾಯಗಳಾಗಿವೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.
ಮೃತಪಟ್ಟವರಲ್ಲಿ ರಾಧಾರವಿ,(22) ಯೋಗೇಂದ್ರ, (21), ಪ್ರೀತಮ್ ಗೌಡ(21), ಬಸವರಾಜು(22), ಅನಘ್ನ(21),ಶಾರೊಲ್(21),ರಂಜಿತಾ(22),ಮಾರುತಿ ಎಂದು ಗುರುತಿಸಲಾಗಿದೆ. ಗಾಯಗೊಂಡವರ ಪೈಕಿ ಅಂಬಿಕಾ(22), ಮಂಜುಳ(27), ಕಾವ್ಯ(24), ನಳಿನಿ (26), ಶ್ವೇತಾ(23),ಮಾನಸ(24),ಲಕ್ಷ್ಮೀ (26), ಸುಷ್ಮಾ(23), ಜಗದೀಶ್(20), ಸುನಿಲ್(26), ಮುತ್ತುರಾಜ್(25), ರಘೂವೀರ್(29) ಎಂಬವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 6 ಜನರಿಗೆ ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.9 ಜನ ಗಾಯಾಳು ಪ್ರಯಾಣಿಕರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ .
ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾದ ವೈಟಲ್ ರೆಕಾಡ್ಸ್ ಎಂಬ ಡಾಟಾ ಎಂಟ್ರಿ ಕಂಪೆನಿಯ ಸುಮಾರು ೩೦ ಮಂದಿ ನೌಕರರು ಶನಿವಾರ ಹಾಗೂ ಭಾನುವಾರ ರಜಾದಿನವಾದ್ದರಿಂದ ಶುಕ್ರವಾರ ಸಂಜೆ ಮೈಸೂರಿನಿಂದ ಹೊರನಾಡು, ಕಳಸ, ಧರ್ಮಸ್ಥಳ, ಉಡುಪಿ ಹಾಗೂ ಮಂಗಳೂರಿಗೆ ಪ್ರವಾಸಕ್ಕೆಂದು ಡಿ.ಬಿ ಟ್ರಾವೆಲ್ಸ್ ಸಂಸ್ಥೆಯ ಟೂರಿಸ್ಟ್ ಬಸ್ಸಿನಲ್ಲಿ ಹೊರಟಿದ್ದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಹಾಗೂ ತಾಲೂಕು ದಂಡಧಿಕಾರಿ ಪುರಂದರ ಹೆಗ್ಡೆ ಆಸ್ಪತ್ರೆ ಗೆ ಬೇಟಿ ನೀಡಿದ್ದಾರೆ. ಗಂಭೀರ ಗಾಯಗೊಂಡ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಸ್ಥಳೀಯ ವೈದ್ಯರು ತುರ್ತು ಚಿಕಿತ್ಸೆ ನೀಡುವ ಮೂಲಕ ಸ್ಪಂದಿಸಿದ್ದಾರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಾರ್ವಜನಿಕರು ಗಾಯಗಳನ್ನಿ ಆಸ್ಪತ್ರೆ ಕರೆ ತರುವಲ್ಲಿ ಸಹಕಾರಿಸಿದ್ದಾರೆ.
ಶುಕ್ರವಾರ ರಾತ್ರಿ ಮೈಸೂರಿನಿಂದ ಹೊರಟ ಬಸ್ಸು ಶೃಂಗೇರಿ ಶಾರದಂಬ ಸನ್ನಿಧಾನಕ್ಕೆ ಹೋಗಿ ಬಳಿಕ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಕಳಸ ದೇವಸ್ಥಾನಕ್ಕೆ ತೆರಳಿ ಶನಿವಾರ ಮಧ್ಯಾಹ್ನ2.10 ರ ವೇಳೆಗೆ ಕಳಸದಿಂದ ಹೊರಟು ಕುದುರೆಮುಖ ಮಾರ್ಗವಾಗಿ ಬಸ್ಸು ಕಾರ್ಕಳ ಕಡೆಗೆ ಬರುತ್ತಿತ್ತು. ಬಸ್ಸು ಕಾರ್ಕಳ ತಾಲೂಕಿನ ಎಸ್.ಕೆ ಬಾರ್ಡರ್ ಸಮೀಪದ ಮುಳ್ಳೂರು ಚೆಕ್‌ಪೋಸ್ಟ್‌ನಿಂದ1 ಕಿ.ಮೀ ಹಿಂದೆ ಇಳಿಜಾರಿನ ಕಡಿದಾದ ತಿರುವಿನಲ್ಲಿ ಅತೀವೇಗವಾಗಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಬಲಭಾಗದ ಬೃಹತ್ ಬಂಡೆಗೆ ಅಪ್ಪಳಿಸಿದ ಪರಿಣಾಮ ಬಸ್ಸಿನ ಬಲಪಾರ್ಶ್ವವು ಸಂಪೂರ್ಣ ಛಿದ್ರಗೊಂಡು ಭೀಕರ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವೃತೆ ಎಷ್ಟಿತ್ತೆಂದರೆ ಬಸ್ಸಿನ ಸ್ಟಿಯರಿಂಗ್ ತುಂಡಾಗಿ ಬಲಭಾಗವೇ ಕಿತ್ತುಹೋಗಿ ಚಾಲಕದ ಶವ ಬಸ್ಸಿನ ಇಂಜಿನ್ ಹಾಗೂ ನುಜ್ಜುಗುಜ್ಜಾದ ಕ್ಯಾಬಿನ್ ನಡುವೆ ಸಿಕ್ಕಿಹಾಕಿತ್ತು. ಇನ್ನುಳಿದವರ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿತ್ತು.
ಅತೀವೇಗವೇ ಅಪಘಾತಕ್ಕೆ ಕಾರಣವಾಯಿತೇ ?
ಹೊರನಾಡಿನಿಂದ ಕಳಸ ದೇವಸ್ಥಾನಕ್ಕೆ ಹೋಗಿ ಮರಳಿ ಕುದುರೆಮುಖ ಮಾರ್ಗವಾಗಿ ಬರುತ್ತಿದ್ದ ಬಸ್ಸು ಅತೀವೇಗವಾಗಿ ಸಂಚರಿಸುತ್ತಿತ್ತು. ಈ ಮೊದಲು ಕಳಸದಲ್ಲಿ ಗ್ಯಾರೇಜ್ ಒಂದರಲ್ಲಿ ತಾಂತ್ರಿಕ ದೋಷ ಸರಿಪಡಿಸಿ ಚಾಲಕ ಮತ್ತೆ ಪ್ರಯಾಣ ಮುಂದುವರಿಸಿದ್ದ ಎಂದು ಗಾಯಗೊಂಡ ಮಾನಸ ಹೇಳಿದ್ದಾರೆ.25 ಕ್ಕೂ ಅಧಿಕ ಯುವತಿಯರು ಬಸ್ಸಿನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಬಸ್ಸು ಅತೀವೇಗವಾಗಿ ಚಲಿಸುತ್ತಿತ್ತು. ಬಸ್ಸು ಮಾಳ ಚೆಕ್‌ಪೋಸ್ಟ್ ತಲುಪಲು ಇನ್ನೇನು ಒಂದೇ ಕಿಲೋಮೀಟರ್ ದೂರ ಇದ್ದಾಗ ಹಠಾತ್ತಾಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಬಂಡೆಗೆ ಅಪ್ಪಳಿಸಿದ ಬಳಿಕ ಮುಂದೆ ಏನಾಯಿತೆಂದು ತಿಳಿಯಲಿಲ್ಲ ಎಂದು ಗಾಯಗೊಂಡ ಮಾನಸ ಘಟನೆಯ ಬಗ್ಗೆ ವಿವರಿಸಿದರು.
ಘಟನಾ ಸ್ಥಳಕ್ಕೆ ಉಡುಪಿ ಹೆಚ್ಚುವರಿ ಎಸ್ಪಿ, ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಿದರು.
.