ಕಾರ್ಕಳ: ಸೆಲ್ಪಿ ಗೀಳು ಜಲಪಾತಕ್ಕೆ ಬಿದ್ದು ಯುವಕ ನೀರುಪಾಲು

ಕಾರ್ಕಳ: ಸ್ವಾತಂತ್ರ್ಯ ದಿನದ ರಜೆಯ ಹಿನ್ನಲೆಯಲ್ಲಿ ಗೆಳೆಯರೊಂದಿಗೆ ಜಲಪಾತಕ್ಕೆ ಸ್ನಾನಕ್ಕೆಂದು ಬಂದಿದ್ದ ಯುವಕ ಸೆಲ್ಫಿಯ ಹುಚ್ಚಿಗೆ ಜಲಪಾತದ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅರ್ಬಿಫಾಲ್ಸ್‌ನಲ್ಲಿ ನಡೆದಿದೆ.

ನಂದಳಿಕೆ ಗ್ರಾಮದ ಮಂಜರಪಲ್ಕೆ ಕೆದಿಂಜೆ ಅಬ್ಬನಡ್ಕದ ಸುದೇಶ್ ಮೂಲ್ಯ (26) ಎಂಬ ಯುವಕ ಮೃತಪಟ್ಟ ದುರ್ದೈವಿ. ಗುರುವಾರ ಸ್ವಾತಂತ್ರ್ಯ ದಿನದಂದು ರಜೆಯಿದ್ದ ಹಿನ್ನಲೆಯಲ್ಲಿ ಸುದೇಶ್ ತನ್ನ ಮೂವರು ಗೆಳೆಯರಾದ ಬೋಳಕೋಡಿಯ ರಾಕೇಶ್ (24) ನಂದಳಿಕೆ ಗ್ರಾಮದ ಹಾಳೆಕಟ್ಟೆಯ ಭರತ್ ಪೂಜಾರಿ(31) ಹಾಗೂ ನಂದಳಿಕೆಯ ಕೊಡ್ಸರಬೆಟ್ಟು ನಿವಾಸಿ ಸಂತೋಷ್ ದೇವಾಡಿಗ (24) ಎಂಬವರೊಂದಿಗೆ ಸೇರಿಕೊಂಡು ಮಧ್ಯಾಹ್ನ ನಿಟ್ಟೆ ಸಮೀಪದ ಅರ್ಬಿ ಜಲಪಾತಕ್ಕೆ ಸ್ನಾನಕ್ಕೆಂದು ಬಂದಿದ್ದರು.

ಈ ನಾಲ್ವರು ಸ್ನಾನ ಮಾಡಿ ಬಳಿಕ ಸುದೇಶ್ ಹಾಗೂ ಭರತ್ ಅಪಾಯಕಾರಿ ಜಲಪಾತದ ಅಂಚಿನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಇಬ್ಬರೂ ಆಯತಪ್ಪಿ ರಭಸವಾಗಿ ಹರಿಯುತ್ತಿದ್ದ ಜಲಪಾತಕ್ಕೆ ಬಿದ್ದ ಬಳಿಕ ಭರತ್ ಈಜಿ ದಡಸೇರಿದರೆ ಸುದೇಶ್ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಪೋಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುದೇಶ್ ಪತ್ತೆ ಹೊಳೆಯಲ್ಲಿ ಹುಡುಕಾಟ ನಡೆಸಿದರೂ ಕತ್ತಲಾಗದರೂ ಸುದೇಶನ ಶವ ಪತ್ತೆಯಾಗಿಲ್ಲ. ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಜಲಪಾತದ ಉಕ್ಕಿಹರಿಯುತ್ತಿದ್ದು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ನಿರಂತರ ೫ ಗಂಟೆಗಳ ಕಾಲ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರು ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಾಂತರ ಠಾಣಾ ಎಸ್‌ಐ ನಾಸಿರ್ ಹುಸೇನ್ ತಿಳಿಸಿದ್ದಾರೆ.
ವೃತ್ತಿಯಲ್ಲಿ ಎಲೆಕ್ಟ್ರಿಶೀಯನ್ ಆಗಿದ್ದ ಸುದೇಶ್ ಸ್ವಾತಂತ್ರ್ಯ ದಿನದ ರಜೆಯನ್ನು ಕಳೆಯಲು ಅರ್ಬಿಫಾಲ್ಸ್‌ಗೆ ಬಂದು ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿರುವುದು ನಿಜಕ್ಕೂ ದುರಂತ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!