ಶಾರ್ಜಾ ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ
ಶಾರ್ಜಾ: ಕಳೆದ 17ವರ್ಷಗಳಿಂದ ಯುಎಈಯ ಶಾರ್ಜದಲ್ಲಿ ಕನ್ನಡದ ಕಹಳೆಯನ್ನ ಊದುತ್ತಿರುವ ಶಾರ್ಜ ಕರ್ನಾಟಕ ಸಂಘವು ಅದ್ದೂರಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಮಕ್ಕಳ ದಿನಾಚರಣೆ, ಮಯೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಸಿದರು.
ಗಣೇಶ್ ರೈ, ಎಂ ಈ ಮೂಳೂರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಅಧ್ಯಕ್ಷ ಈ.ಪಿ ಜಾನ್ಸನ್, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಪೋಷಕ ಮಾರ್ಕ್ ಡೆನ್ನಿಸ್, ಎಂ ಸ್ಕ್ವೇರ್ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಮುಸ್ತಫಾ, ಮರುಭೂಮಿ ನಾಡಿನಲ್ಲಿ ಕನ್ನಡ ಕಂಪನ್ನು ಪಸರಿಸುತ್ತಿರುವ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಆನಂದ್ ಬೈಲೂರ್, ಪ್ರಧಾನ ಕಾರ್ಯದರ್ಶಿ ನೋಯೆಲ್ ಅಲ್ಮೇಡಾ, ಉಪಸ್ಥಿತರಿದ್ದರು
ಮಕ್ಕಳ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಅನಿವಾಸಿ ಕನ್ನಡಿಗರ ಮಕ್ಕಳಿಂದ ಸಂಗೀತ ರಸಮಂಜರಿ, ವೈವಿಧ್ಯಮಯ ನೃತ್ಯ ಪ್ರದರ್ಶನ ನೆರೆದಿದ್ದ ಕನ್ನಡ ಪ್ರೇಮಿ ಸಭಿಕರಿಗೆ ರಸದೌತಣ ನೀಡಿತು. ಅನ್ಯ ರಾಜ್ಯದ ಅನ್ಯ ಭಾಷೆಯ ಮಕ್ಕಳು ‘ಹಚ್ಚೇವು ಕನ್ನಡದ ದೀಪ’ ಹಾಡನ್ನು ಅತ್ಯಂತ ಸ್ಪಷ್ಟವಾಗಿ, ಸುಮಧುರವಾಗಿ ಹಾಡುವ ಮೂಲಕ ಸಭಿಕರನ್ನು ಮೂಕವಿಸ್ಮಯಗೊಳಿಸಿದರು.
ಯುಎಈಯಲ್ಲಿ ದಶಕಗಳಿಂದ ನೆಲೆಸಿ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿ, ಕನ್ನಡ ಪರ ಸಂಘಟನೆಗಳನ್ನು ಪ್ರೋತ್ಸಾಹಿಸುವ ಸ್ರ್ಫೇಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಹೆಗ್ಡೆಯವರಿಗೆ ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ‘ಮಯೂರ ವಿಶ್ವ ಮಾನ್ಯ ಕನ್ನಡಿಗ’ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರನ್ನು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಯವರು ಶಾಲು ಹೊದಿಸಿ ಗೌರವಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಅತಿಥಿಗಳನ್ನು, ಪೋಷಕರನ್ನು, ವಿವಿಧ ಸಂಘ ಸಂಸ್ಥೆಗಳ ಮುಖಂಡರನ್ನು ಶಾರ್ಜಾ ಕರ್ನಾಟಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು