ಕಲಾಂಗಣ್ : ಆಂಕ್ವಾರ್ ಮೇಸ್ತ್ರಿ ನಾಟಕ
ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ, 04.08.2019 ರಂದು ಮಾಂಡ್ ಸೊಭಾಣ್ ಆಯೋಜಿತ ತಿಂಗಳ ವೇದಿಕೆ ಸರಣಿಯ 212ನೇ ಕಾರ್ಯಕ್ರಮ ನಡೆಯಿತು. ನಾಟಕ ನಿರ್ದೇಶಕ ಡೆನಿಸ್ ಮೊಂತೇರೊ ಕಂಚಿನ ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವ ಗೆಳೆತನ ದಿನದ ಸಲುವಾಗಿ ಪ್ರೇಕ್ಷಕರ ಪರವಾಗಿ ಪ್ರಮೋದ್ ಪಿಂಟೊ ಚಿಕ್ಕಮಗಳೂರು ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ ಹಾಗೂ ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ನಂತರ ಅಸ್ತಿತ್ವ ನಾಟಕ ತಂಡದಿಂದ ಚಾಫ್ರಾ ಡಿಕೋಸ್ತಾ ವಿರಚಿತ ಆಂಕ್ವಾರ್ ಮೆಸ್ತ್ರಿ (ಅವಿವಾಹಿತ ಶಿಕ್ಷಕ) ನಾಟಕ ಪ್ರಸ್ತುತವಾಯಿತು. ಕ್ಲಾನ್ವಿನ್ ಫೆರ್ನಾಂಡಿಸ್, ಕ್ರಿಸ್ಟೋಫರ್ ಡಿಸೋಜ, ರೋಹನ್ ಆಡ್ಕಬಾರೆ, ಆಶೆಲ್ ಡಿಸಿಲ್ವಾ, ಝೀನಾ ಬ್ರಾಗ್ಸ್ ಮತ್ತು ಆನ್ಸ್ಟಿನ್ ಮಚಾದೊ ನಟಿಸಿದ್ದರು. ಲೆಸ್ಟರ್ ಮಿನೇಜಸ್ ಸಂಗೀತ ಹಾಗೂ ಜ್ಯಾಕ್ಸನ್ ಡಿಕುನ್ಹಾ ಬೆಳಕು ನಿರ್ವಹಣೆ ಮಾಡಿದರು.
2002 ಜನವರಿ 6 ರಿಂದ ಆರಂಭಿಸಿ, ನಿರಂತರವಾಗಿ ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ 6.30 ರಿಂದ ಕಲಾಂಗಣದಲ್ಲಿ ತಿಂಗಳ ವೇದಿಕೆ ಸರಣಿಯಲ್ಲಿ, ಕೊಂಕಣಿ ಪ್ರದರ್ಶನ ಕಲೆಯ ಪ್ರಾಂತ್ಯವಾರು, ಪ್ರಬೇಧವಾರು ವೈವಿಧ್ಯಮಯ ಸಾದರ ಕಲೆಗಳು ನಡೆಯುತ್ತವೆ.