“ಮತ್ತೆ ಕಲ್ಯಾಣ” ಕಾರ್ಯಕ್ರಮಕ್ಕೆ ಕೆ.ನೀಲಾ ಭಾಗವಹಿಸುವ ಬಗ್ಗೆ ತಿಳಿಸಿಲ್ಲ:ಸಂಘಟಕ ದ್ಯಾಮೇಶ ಸ್ಪಷ್ಟನೆ

ಉಡುಪಿ:   ‘ಮತ್ತೆ ಕಲ್ಯಾಣ,’ ಮಹಿಳಾ ಹೋರಾಟಗಾರ್ತಿ ಭಾಗವಹಿಸಲ್ಲ ಎಂಬ ಹೇಳಿಕೆಗೆ  ಕಾರ್ಯಕ್ರಮದ ಸಂಯೋಜಕರೂ, ಸ್ವಾಮೀಜಿಯ ಆಪ್ತರೂ ಆಗಿರುವ ದ್ಯಾಮೇಶ್ ಸ್ಪಷ್ಟನೆ ನೀಡಿದ್ದು,
 ಕೆ. ನೀಲಾ ಅವರು ಈ ಕಾರ್ಯಕ್ರಮಕ್ಕೆ ಬರಲಾಗುವುದು ಕಷ್ಟ ಎಂದು ಮೊದಲೇ ತಿಳಿಸಿದ್ದರು. ಆದರೇ ಆಹ್ವಾನ ಪತ್ರ ಬಂದ ಬಳಿಕ ಈ ರೀತಿಯ ಕಾರಣಗಳನ್ನು ಮುಂದಿಡುತ್ತಿದ್ದಾರಷ್ಟೇ. ಹಿಂದೆ ಬರಲಾಗುವುದು ಕಷ್ಟ ಎಂದವರಿಗೆ ನಂತರದ ದಿನಗಳಲ್ಲಿ ಐದಾರು ಬಾರಿ ಫೋನ್ ಮೂಲಕ  ಸಂಪರ್ಕಿಸಲು ಮುಂದಾದರೂ ಅವರು ಕರೆ ಸ್ವೀಕರಿಸುತ್ತಿರಲಿಲ್ಲ ಎಂದು ದ್ಯಾಮೇಶ ಸ್ಪಷ್ಟ ಪಡಿಸಿದರು.

ಬಸವಾದಿ ಶಿವಶರಣರ ವಚನ ಸಾಹಿತ್ಯದ ಆದರ್ಶದ ನೆಲೆಯಲ್ಲಿ `ಸಹಮತ’ ವೇದಿಕೆಯಿಂದ ರೂಪುಗೊಂಡದ್ದೇ `ಮತ್ತೆ ಕಲ್ಯಾಣ’. ಇದನ್ನು ಕೈಗೆತ್ತಿಕೊಳ್ಳುವ ಮುನ್ನ ಸಾಕಷ್ಟು ಚಿಂತನೆ ನಡೆದಿದೆ. ಇಲ್ಲಿ ಯಾರನ್ನೋ ಒಳಗೆ ಕರೆದುಕೊಳ್ಳುವ, ಮತ್ತಾರನ್ನೋ ಹೊರಗೆ ಹಾಕುವ ಉದ್ದೇಶವಿಲ್ಲ. ಎಲ್ಲರನ್ನೂ ಒಟ್ಟಿಗೆ ತರುವ ಸತ್ಕಾರ್ಯವಿದು. ಅಂಥ ಸಂದರ್ಭದಲ್ಲಿ ಗೊತ್ತಿಲ್ಲದೆಯೇ ತಪ್ಪುಗಳಾಗಬಹುದು. `ನಡೆವವರು ಎಡವುವುದು’ ಸಾಮಾನ್ಯ. ಉನ್ನತ ಧ್ಯೇಯ ಹೊಂದಿ ಬೃಹತ್ ಕಾರ್ಯಕ್ರಮ ರೂಪಿಸುವಾಗ ಅವೆಲ್ಲ ಸಹಜ. ಅದನ್ನೇ ನೆಪ ಮಾಡಿಕೊಂಡು ಹಾಲಿಗೆ ಹುಳಿ ಹಿಂಡದೆ ದೋಷಗಳನ್ನು ಸರಿಪಡಿಸುವತ್ತ ಗಮನ ಹರಿಸಬೇಕು. ಹಾಗೆ ಮಾಡದೆ ಟೀಕಿಸುವಲ್ಲೇ ತೃಪ್ತರಾದರೆ ಕಟ್ಟುವ ಕಾರ್ಯದಲ್ಲಿ ಪಾಲ್ಗೊಂಡವರಿಗೆ ತುಂಬಾ ವೇದನೆಯಾಗುವುದು. ಕಟ್ಟುವುದು ಕಷ್ಟ, ಕೆಡವುವುದು ಸುಲಭ. ಬೆಂಕಿಯನ್ನು ಯಾರಾದರೂ ಹಚ್ಚಬಹುದು. ಅದೇ ದೀಪ ಬೆಳಗಿಸುವುದು ತುಂಬಾ ಕಷ್ಟ ಮತ್ತು ಕ್ಲಿಷ್ಟ. ಅದರಲ್ಲೂ ಗಾಳಿ ಬೀಸುವಾಗ ಹೇಗೆ ದೀಪ ಹಚ್ಚಲು ಸಾಧ್ಯ?

30 ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ `ಮತ್ತೆ ಕಲ್ಯಾಣ’ ಅಭಿಯಾನದ ಉಪನ್ಯಾಸಕರ ಆಯ್ಕೆಯಲ್ಲಿ ಸಾಕಷ್ಟು ಎಚ್ಚರವಹಿಸಲಾಗಿದೆ. `ಆಯಾ ಜಿಲ್ಲಾ ಸಮಿತಿಯವರೇ ಸಮಾರಂಭದ ಅಧ್ಯಕ್ಷತೆ ವಹಿಸುವ ವ್ಯಕ್ತಿಯ ಆಯ್ಕೆ ಮಾಡಬೇಕು. ಅವರು ಬಸವತತ್ವ ಪ್ರೇಮಿಗಳಾಗಿರಬೇಕು. ಯಾವುದೇ ಪಕ್ಷ, ಪಂಗಡಗಳಿಗೆ ಸೀಮಿತರಾಗದೆ ಜನಪರ ಕಾಳಜಿಯುಳ್ಳವರಾಗಿ ಎಲ್ಲರ ಪ್ರೀತಿಗೆ ಭಾಜನರಾಗಿರಬೇಕು. ಅಲ್ಲಿ ಲಿಂಗ, ಜಾತಿ ನೋಡಬಾರದು’ ಎನ್ನುವ ಸೂಚನೆಯನ್ನು ಮೊದಲೇ ಅವರಿಗೆ ನೀಡಲಾಗಿದೆ.

ಜಿಲ್ಲಾ ಸಮಿತಿಯವರ ಭಾವನೆಗಳನ್ನೂ ನಾವು ಗೌರವಿಸಬೇಕಲ್ಲವೇ? ಈ ನೆಲೆಯಲ್ಲಿ ಅವರ ತೀರ್ಮಾನ ಸರಿಯಿಲ್ಲದಿದ್ದರೆ ಅಲ್ಲೇ ಅದನ್ನು ಹೇಳಬೇಕು. ಬದಲಾಗಿ ಅದನ್ನೇ ಒಂದು ದೋಷವೆಂದು ಸಾಮಾಜಿಕ ಜಾಲ ತಾಣಗಳಲ್ಲಿ `ಇದು ಯಾರ ಕಲ್ಯಾಣ’, `ನೀವು ದಯವಿಟ್ಟು ಬರಬೇಡಿ’, `ನನ್ನದೊಂದು ಧಿಕ್ಕಾರ’ ಎಂದೆಲ್ಲ ವಿವಾದ ಎಬ್ಬಿಸುವುದು ಖಂಡಿತ ಕಟ್ಟುವ ಕಾರ್ಯವಲ್ಲ. ಕಟ್ಟುವ ಕಾರ್ಯಕ್ಕೆ ಬೇಕಾದ್ದು ತಾಳ್ಮೆ, ಎಲ್ಲರನ್ನೂ ಒಳಗೊಳ್ಳುವ ಹೃದಯ ವೈಶಾಲ್ಯತೆ, ವೈರಿಯನ್ನೂ ಪ್ರೀತಿಸಿ ಪರಿವರ್ತನೆ ಮಾಡುವ ವಿವೇಕ. ಇದನ್ನು ನಾವು ಎಲ್ಲರಿಂದಲೂ ಬಯಸುತ್ತೇವೆ. ಅದರ ಮೇಲೂ ಏನಾದರೂ ತಪ್ಪುಗಳಾಗಿದ್ದರೆ ಮುಂದಿನ ದಿನಗಳಲ್ಲಿ ತಿದ್ದಿಕೊಳ್ಳಲು ಖಂಡಿತ ಅವಕಾಶವಿದೆ.

Leave a Reply

Your email address will not be published. Required fields are marked *

error: Content is protected !!