ಪತ್ರಕರ್ತರು ಸಾಮಾಜಿಕ ಕಾರ್ಯಕ್ರಮಗಳಿಗೆ ಮಹತ್ವ ನೀಡಬೇಕು – ಭಾಸ್ಕರ್ ಹಂದೆ

ಉಡುಪಿ: ಪತ್ರಕರ್ತರು ಕ್ರೀಡಾ ಚಟುವಟಿಕೆಗಳಷ್ಟೇ ಸಾಮಾಜಿಕ ಕಾರ್ಯಕ್ರಮಗಳಿಗೂ ಕೂಡ ಮಹತ್ವ ನೀಡಬೇಕು ಎಂದು ಸಿಂಡಿಕೇಟ್ ಬ್ಯಾಂಕ್ ಮಣಿಪಾಲದ ವಲಯ ಕಚೇರಿಯ ಪ್ರಧಾನ ವ್ಯವಸ್ಥಾಪಕ ಭಾಸ್ಕರ್ ಹಂದೆ ಹೇಳಿದರು.

 ಅವರು ಶನಿವಾರ ನಗರದ ಪುರಭವನದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಜಂಟಿ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಸದಾ ಎಚ್ಚರಿಕೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಮಾದಕ ದ್ರವ್ಯ ಸೇವನೆ ವಿರುದ್ದ ಕೂಡ ದನಿ ಎತ್ತಿ ಸತತ ಎರಡು ತಿಂಗಳು ಅಭಿಯಾನ ನಡೆಸಿದ್ದು ಅಂತಹ ಕಾರ್ಯಕ್ರಮಗಳು ಜನರಿಗೆ ತಲುಪಲು ಸುಲಭವಾಗುತ್ತದೆ. ಅಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ನಡೆಸುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಪತ್ರಕರ್ತರ ಸಹಕಾರದಿಂದ ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ. ಪತ್ರಕರ್ತರು ಹೆಚ್ಚು ಒತ್ತಡದಿಂದ ಕಾರ್ಯಚರಿಸುತ್ತಿರುವಾಗ ಅವರಿಗೆ ಆಗಾಗ ಕ್ರೀಡಾ ಚಟುವಟಿಕೆಗಳು ನಡೆಸಿದಾಗ ಮನಸ್ಸು ಉಲ್ಲಸಿತವಾಗಿರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಉದಯ್ ಆಚಾರ್ ಸಾಸ್ತಾನ ಅವರಿಗೆ ವೈದ್ಯಕೀಯ ನೆರವನ್ನು ವಿತರಿಸಲಾಯಿತು.ಕ್ರೀಡಾ ಕಾರ್ಯದರ್ಶಿ ಹರೀಶ್ ಪಾಲೇಚ್ಚಾರ್, ವರದಿಗಾರರಾದ ಅಶೋಕ್ ಪುತ್ತೂರು, ಪಲ್ಲವಿ ಸಂತೋಷ್ ವಿಜೇತರ ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್ ಉಪಸ್ಥಿತರಿದ್ದರು.

ಸಹ ಕಾರ್ಯದರ್ಶಿ ಮೈಕಲ್ ರೊಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು ವಂದಿಸಿದರು. ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!