ಅಗಲಿದ ಮಾಧ್ಯಮ ಮಿತ್ರನಿಗೆ ಪತ್ರಕರ್ತರ ಸಂಘದಿಂದ ನುಡಿ ನಮನ
ಮಂಗಳೂರು: ಡೆಂಗ್ಯೂ ಜ್ವರದಿಂದ ಭಾನುವಾರ ತಡರಾತ್ರಿ ಸಾವನ್ನಪ್ಪಿದ ಖಾಸಗಿ ಸುದ್ದಿವಾಹಿನಿಯ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ವತಿಯಿಂದ ನಡೆದ ಸಭೆಯಲ್ಲಿ ಅಗಲಿದ ಮಾಧ್ಯಮ ಮಿತ್ರನಿಗೆ ಪತ್ರಕರ್ತರು ನುಡಿನಮನ ಸಲ್ಲಿಸಿದರು. ಮೌನಪ್ರಾರ್ಥನೆ ಸಲ್ಲಿಸಿ ಅಗಲಿದ ಆತ್ಮಕ್ಕೆ ಸದ್ಗತಿ ಕೋರಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಸದಾ ನಗುಮುಖದೊಂದಿಗೆ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ನಾಗೇಶ್ ಪಡು ಅವರು ಪ್ರತಿಭಾವಂತ ವಿಡಿಯೋ ಜರ್ನಲಿಸ್ಟ್ ಆಗಿದ್ದರು. ಪರೋಪಕಾರ ಮನೋಭಾವ, ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದ ಅವರು ಅಕಾಲಿಕವಾಗಿ ಮೃತಪಟ್ಟಿರುವುದು ಎಲ್ಲರಿಗೂ ನೋವು ತಂದಿದೆ ಎಂದರು.
ದಿನವಿಡೀ ಸುದ್ದಿಯ ಹಿಂದೆ ಬಿದ್ದು ಒತ್ತಡದಲ್ಲಿ ಜೀವನ ನಡೆಸುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದರು. ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಮಾತನಾಡಿ, ಪತ್ರಕರ್ತರು ತಮ್ಮ ಕೆಲಸದ ಜತೆಗೆ ಆರೋಗ್ಯದ ಕಡೆಗೂ ಗಮನ ನೀಡಬೇಕು. ಕಚೇರಿಯ ಒತ್ತಡದ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದರು.
ಈ ಸಂದರ್ಭ ಮಾತನಾಡಿದ ಎಲ್ಲ ಪತ್ರಕರ್ತರು, ಸಂಘದಿಂದ ಪತ್ರಕರ್ತರಿಗೆ ಕಷ್ಟಕಾಲದಲ್ಲಿ ನೆರವಾಗಲು ನಿಧಿಯೊಂದನ್ನು ಸ್ಥಾಪಿಸಬೇಕು, ನಾಗೇಶ್ ಪಡು ಅವರ ಕುಟುಂಬಕ್ಕೆ ಸಂಘದಿಂದ ನೆರವು ನೀಡಬೇಕು ಎಂದರು. ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮೀನುಗಾರಿಕಾ ಇಲಾಖೆ ನಿವೃತ್ತ ಅಧಿಕಾರಿ ಸುರೇಶ್ ಕುಮಾರ್, ವಿಜಯಾ ಬ್ಯಾಂಕ್ನ ನಿವೃತ್ತ ಉದ್ಯೋಗಿ ರವಿ, ಉಪಸ್ಥಿತರಿದ್ದರು.
ಪತ್ರಕರ್ತರಾದ ಬಾಲಕೃಷ್ಣ ಪುತ್ತಿಗೆ, ಪಿ.ಬಿ. ಹರೀಶ್ ರೈ, ಪುಷ್ಪರಾಜ್ ಬಿ.ಎನ್., ಮುಹಮ್ಮದ್ ಆರೀಫ್, ಸತ್ಯಾ ಅನ್ಸಾರ್ ಇನೋಳಿ, ಲಕ್ಷೀನಾರಾಯಣ್, ಭಾಸ್ಕರ ರೈ ಕಟ್ಟ, ವಿಜಯ್ ಕೋಟ್ಯಾನ್, ಶಶಿಧರ ಪೊಯ್ಯೆತ್ತಬೈಲ್ ಮೊದಲಾದವರು ನುಡಿ ನಮನ ಸಲ್ಲಿಸಿದರು. ಬಳಿಕ ನಾಗೇಶ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.