ಪತ್ರಕರ್ತರು ಪೊಲೀಸರ ಮಾದರಿಯಲ್ಲೇ ಸಮಾಜದ ಸ್ವಾಸ್ಥ್ಯ ಕಾಪಾಡುವವರು
ಉಡುಪಿ: ಪತ್ರಕರ್ತರು ಪೊಲೀಸರ ಮಾದರಿಯಲ್ಲೇ ಸಮಾಜದ ಸ್ವಾಸ್ಥ್ಯ ಕಾಪಾಡುವವರು. ಪೊಲೀಸರಂತೆ ಮಾಧ್ಯಮದ ಸದಸ್ಯರು ಕುಟುಂಬದಿಂದ, ಖಾಸಗಿ ಜೀವನದ ಸಂಭ್ರಮದಿಂದ ದೂರ ಉಳಿದು ಬಿಟ್ಟಿದ್ದಾರೆ. ನಿಜಕ್ಕೂ ಈ ಎರಡು ಕ್ಷೇತ್ರ ಬಹಳ ಚಾಲೆಂಜಿಂಗ್ ಮತ್ತು ತ್ಯಾಗದ್ದು ಎಂದು ಉಡುಪಿ ಅಡಿಷನಲ್ ಎಸ್‍ಪಿ ಕುಮಾರಚಂದ್ರ ಹೇಳಿದರು.
ಉಡುಪಿಯ ಕಟಪಾಡಿಯಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡೋತ್ಸವದ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕುಮಾರಚಂದ್ರ ಮಾತನಾಡಿದರು. ಸಾರ್ವಜನಿಕರು ಮತ್ತು ಸರ್ಕಾರಿ ವ್ಯವಸ್ಥೆ ಜೊತೆ ಪತ್ರಕರ್ತರ ಕಾರ್ಯ ಬಹಳ ಮಹತ್ವದ್ದು ಎಂದು ಹೇಳಿದರು.
ಕಾಪು ತಾಲೂಕು ಅಧ್ಯಕ್ಷ ಪ್ರಮೋದ್ ಸುವರ್ಣ ಕಟಪಾಡಿ ಮಾತನಾಡಿ, ಪತ್ರಕರ್ತರು ಸಮಾಜದ ಎಲ್ಲರೊಂದಿಗೆ ಸ್ನೇಹ ಮತ್ತು ನಿಷ್ಠುರದ ವ್ಯಕ್ತಿತ್ವ ಇಟ್ಟುಕೊಳ್ಳಬೇಕಾದವರು. ಪಕ್ಷಾತೀತ, ಜಾತ್ಯಾತೀತವಾಗಿ ಸಮಾಜದ ನೊಂದವರ ಪರವಾಗಿ ಪತ್ರಕರ್ತರು ಮುಂದೆಯೂ ಕೆಲಸ ಮಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ನಿವೃತ್ತ ಪೊಲೀಸ್ ಉಪನಿರೀಕ್ಷಕ ರಾಜಗೋಪಾಲ್, ಗೃಹ ರಕ್ಷಕದಳದ ಲಕ್ಷ್ಮೀನಾರಾಯಣ ರಾವ್, ಅಗ್ನಿಶಾಮಕ ದಳದ ಅಶ್ವಿನ್ ಸನಿಲ್, ಯೋಗ ಸಾಧಕಿ ತನುಶ್ರೀ, ಕರಾಟೆ ಸಾಧಕಿ ಚೈತ್ರ ಸಾಲಿಯಾನ್, ರುದ್ರಭೂಮಿ ನಿರ್ವಾಹಕ ಕಿಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾಪು ವಲಯ ಪ್ರೆಸ್ ಕ್ಲಬ್‍ನ ಪತ್ರಕರ್ತರಿಗೆ ಹಲವಾರು ಕ್ರೀಡಾ ಚಟುವಟಿಕೆ ನಡೆದಿದ್ದು, ಅದರ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. ರಾಜಕೀಯ, ಸಮಾಜ ಸೇವಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಟುಂಬ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಿದ್ದು ಕುಟುಂಬದವರು ಪಾಲ್ಗೊಂಡರು. ಸ್ಥಳೀಯ ಸಂಘ ಸಂಸ್ಥೆಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.