ಡಿಕೆಶಿ ಕೈಯಲ್ಲಿ ಜೆಡಿಎಸ್ ಬಾವುಟ: ರಾಜಕೀಯ ವಲಯದಲ್ಲಿ ಭಾರಿ ಸಂಚಲನ
ಬೆಂಗಳೂರು: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಡಿ.ಕೆ ಶಿವಕುಮಾರ್ ಅವರು ಜಾಮೀನು ಪಡೆದು ಶನಿವಾರ ಬೆಂಗಳೂರಿಗೆ ಆಗಮಿಸಿದರು. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮೆರವಣಿಗೆ ಮೂಲಕ ಬರುವ ವೇಳೆ ಡಿಕೆಶಿ ಜೆಡಿಎಸ್ ಬಾವುಟ ಹಿಡಿದಿದ್ದು ಜನತಾದಳದ ಕಾರ್ಯಕರ್ತರಲ್ಲಿ ಭಾರಿ ಸಂಚಲನ ಸೃಷ್ಟಿ ಯಾಗಿದೆ.
ಮೆರವಣಿಗೆಯಲ್ಲಿ ಬರುತ್ತಿದ್ದ ಡಿಕೆಶಿ ಅವರಿಗೆ ಯಲಹಂಕ ಬಳಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟ ನೀಡಿದರು. ಅವರೂ ಬಾವುಟವನ್ನು ಪ್ರೀತಿಯಿಂದ ಸ್ವೀಕರಿಸಿ ಒಂದು ಬಾರಿ ಗಾಳಿಯಲ್ಲಿ ಹಾರಾಡಿಸಿ ಮತ್ತೆ ಕಾರ್ಯಕರ್ತರ ಕೈಗಿಟ್ಟರು. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ.
ಅದರಲ್ಲಿಯೂ ಜೆಡಿಎಸ್ ಬೆಂಬಲಿತ ಫೇಸ್‌ಬುಕ್ ಪೇಜ್‌ಗಳು ಈ ಫೋಟೋವನ್ನು ಹೆಚ್ಚು ಹಂಚಿಕೊಂಡಿವೆ. ಹಲವರು ತಮ್ಮ ವೈಯಕ್ತಿಕ ಖಾತೆಗಳಲ್ಲೂ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
1985ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ಗೆ ಈ ವರೆಗಿನ ಎಲ್ಲ ಚುನಾವಣೆಗಳಲ್ಲೂ ಪ್ರತಿಸ್ಪರ್ಧಿಯಾಗಿದ್ದದ್ದು ಜೆಡಿಎಸ್‌ನ ಅಭ್ಯರ್ಥಿಗಳೇ. ಜೆಡಿಎಸ್ ವಿರುದ್ಧವೇ ರಾಜಕಾರಣ ಮಾಡಿಕೊಂಡು ಬಂದ ಡಿ.ಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಜತೆಗಿನ ಮಿತ್ರತ್ವದ ಹಿನ್ನೆಲೆಯಲ್ಲಿ ಜೆಡಿಎಸ್ ಮನಸ್ಸುಗಳಿಗೆ ಹತ್ತಿರವಾಗಿದ್ದಾರೆ.