ಕುತ್ಪಾಡಿ: ಜೇಸಿ ಸಪ್ತಾಹದ ಸಮಾರೋಪ
ಉಡುಪಿ : ಜೇಸಿಐ ಉದ್ಯಾವರ ಕುತ್ಪಾಡಿ ನೇತೃತ್ವದಲ್ಲಿ ನಡೆದ ಒಂದು ವಾರದ ಸಪ್ತಾಹ ಯಶಸ್ವಿಯಾಗಿ ಕೊನೆಗೊಂಡಿತು. ಉದ್ಯಾವರ ಗ್ರಾಮದಲ್ಲಿ ವಿವಿಧ ಶಾಶ್ವತ ಕಾರ್ಯಕ್ರಮಗಳ ಜೊತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಜೇಸಿ ವಲಯಾಧ್ಯಕ್ಷರಾದ ಜೇಸಿ ಅಶೋಕ್ ಚೂಂತಾರು ಜೇಸಿ ಸಪ್ತಾಹವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸರಕಾರಿ ಪದವಿಪೂರ್ವ ಕಾಲೇಜು ಬೋಳರೂಗುಡ್ಡೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಶಾಶ್ವತ ಕೊಡುಗೆಗಳನ್ನು ನೀಡಲಾಯಿತು.
ಸಂತ ಫ್ರಾನ್ಸಿಸ್ ಝೇವಿಯರ್ ಕನ್ನಡ ಪ್ರೌಢಶಾಲೆಯಲ್ಲಿ ಹದಿಹರೆಯರ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಜಾಗೃತಿ ಮೂಡಿಸಲಾಯಿತು. ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿ ಸೌಜನ್ಯ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿಯನ್ನು ನೀಡಿದರು.
ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯಾವರ ಗ್ರಾಮ ಪಂಚಾಯತ್ನಲ್ಲಿ ಮಳೆ ಕೊಯ್ಲು ಮಾಹಿತಿ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೊ ರವರು ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದರು.
ಅಂತರ್ಜಾಲದ ಸುಳಿಯಲ್ಲಿ ಮಾಹಿತಿ ಕಾರ್ಯಾಗಾರವನ್ನು ಜ್ಞಾನಗಂಗಾ ಕಾಲೇಜು ಮೂಡುಬೆಳ್ಳೆ ಮತ್ತು ಟ್ರಿನಿಟಿ ಐಟಿಐ ಉದ್ಯಾವರ ಇಲ್ಲಿಯ ವಿದ್ಯಾರ್ಥಿಗಳಿಗೆ ಫಾ. ರಿಚರ್ಡ್ ಡಿಸೋಜ ನೀಡಿದರು.
ಜೇಸಿಐ ಉದ್ಯಾವರ ಕುತ್ಪಾಡಿ ನೇತೃತ್ವದಲ್ಲಿ ನೇಜಾರಿನ ಸ್ಪಂದನ ಆಶ್ರಮಕ್ಕೆ ಭೇಟಿ ನೀಡಿ ಪರಿಕರ ವಿತರಣೆ ಮತ್ತು ಸಹಾಯಧನ ವಿತರಣೆ ನಡೆಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ಮೂಡುಬೆಟ್ಟು ಇವರ ಸಹಕಾರದಿಂದ ಜೇಸಿ ಉದ್ಯಾವರ ಕುತ್ಪಾಡಿ ನೇತೃತ್ವದಲ್ಲಿ ಆರೋಗ್ಯವಂತ ಶಿಶು ಸ್ಪರ್ಧೆಯನ್ನು ನಡೆಸಲಾಯಿತು. 80 ಕ್ಕೂ ಅಧಿಕ ಚಿಕ್ಕ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಸೌಂದರ್ಯ ಸಭಾಭವನ ಉದ್ಯಾವರ ಇಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಜೇಸಿಐ ಉದ್ಯಾವರ ಕುತ್ಪಾಡಿ ಘಟಕಾಧ್ಯಕ್ಷ ರಾಘವೇಂದ್ರ ವಹಿಸಿದ್ದರು. ಉದ್ಯಮಿ ಅಮೃತ ಡಿಸಿಲ್ವಾ, ಡೆಂಜಿಲ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಕುಮಾರ್ ಉದ್ಯಾವರ, ಸಮಾಜ ಸೇವಕ ಪ್ರತಾಪ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಸ್ಟೀವನ್ ಕುಲಾಸೊ ಉದ್ಯಾವರ, ಸಪ್ತಾಹದ ಮಹಾ ನಿರ್ದೇಶಕರಾದ ರಾಘವೇಂದ್ರ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವಿಠಲ ನಾಯಕ್ ಕಲ್ಲಡ್ಕ ಮತ್ತು ತಂಡದವರಿಂದ ಗೀತ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ರಮೇಶ್ ಕುಮಾರ್, ಸಂತೋಷ್ ಕುಮಾರ್, ಶಂಕರ ಪೂಜಾರಿ, ಗಿರೀಶ್, ಪ್ರೇಮ್ ಮಿನೇಜಸ್, ಸುಪ್ರೀತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.