ಬಿಜೆಪಿ ಟ್ರಬಲ್ ಶೂಟರ್ ಅರುಣ್ ಜೇಟ್ಲಿ ಪಂಚಭೂತಗಳಲ್ಲಿ ಲೀನ
ನವದೆಹಲಿ: ಶನಿವಾರ ನಿಧನರಾದ ಬಿಜೆಪಿ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಮಹಾರಾಜ್ ಕಿಶನ್ ಜೇಟ್ಲಿ(66) ಅವರು ಭಾನುವಾರ ಮಧ್ಯಾಹ್ನ ಪಂಚಭೂತಗಳಲ್ಲಿ ಲೀನವಾದರು.
ಇಂದು ಮಧ್ಯಾಹ್ನ ದೆಹಲಿಯ ನಿಗಂಬೋಧ್ ಘಾಟನ್ ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಇದಕ್ಕು ಮುನ್ನ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಪ್ರಧಾನ ಕಚೇರಿಯಿಂದ ನಿಗಂಬೋಧ್ ವರೆಗೆ ಮೆರವಣಿಗೆ ಮೂಲಕ ತರಲಾಯಿತು.
66 ವರ್ಷದ ಅರುಣ್ ಜೇಟ್ಲಿ ಅವರು ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಗಸ್ಟ್ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ.
ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಯೋಗ ಗುರು ಬಾಬಾ ರಾಮ್ ದೇವ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅರುಣ್ ಜೇಟ್ಲಿ ಅಂತಿಮ ನಮನ ಸಲ್ಲಿಸಿದರು.