ಪಡಿತರ ಚೀಟಿದಾರರಿಗೆ ಗೋಧಿ, ಬೇಳೆ ವಿತರಿಸದೆ ಮೋಸ : ಐವನ್ ಡಿಸೋಜ ಆಕ್ರೋಶ
ಮಂಗಳೂರು : (ಉಡುಪಿ ಟೈಮ್ಸ್ ವರದಿ) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆ ಅನ್ವಯ ಬಿಪಿಎಲ್ ಕಾರ್ಡ್ ದಾರರಿಗೆ 7 ಕೆಜಿ ಅಕ್ಕಿಯ ಬದಲು ಕೇವಲ 5 ಕೆಜಿ ನೀಡಲಾಗುತ್ತಿದೆ. 2 ಕೆಜಿ ಗೋಧಿ ಜೊತೆಗೆ ತೊಗರಿ ಬೇಳೆಯನ್ನು ಕಾರ್ಡ್ ಒಂದಕ್ಕೆ 2 ಕೆಜಿ ನೀಡುವುದಾಗಿ ಹೇಳಿಕೆ ನೀಡಿ ಈಗ ಅದನ್ನು ವಿತರಿಸುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರವು ಕೇಂದ್ರದಿಂದ ಕಿಟ್ ನೀಡಿರುವುದಾಗಿ ಪ್ರಕಟಿಸಿ, ಅದನ್ನು ನೀಡದೆ ಬಿಪಿಎಲ್ ಕಾರ್ಡ್ದಾರರಿಗೆ ತೀರಾ ನಿರಾಸೆಯನ್ನುಂಟು ಮಾಡಿಸಿದೆ. ಕೇವಲ ಬೆಳ್ತಿಗೆ ಅಕ್ಕಿಯನ್ನು ಮಾತ್ರ ನೀಡಲಾಗುತ್ತಿದ್ದು, ಬೆಳೆ ಗೋಧಿಯ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ ಎಂದು ನ್ಯಾಯಬೆಲೆ ಅಂಗಡಿದಾರರು ತಿಳಿಸಿದ್ದಾರೆ ಎಂದರು.
ಎಪಿಎಲ್ ಕಾರ್ಡ್ದಾರರಿಗೆ ಸಹ ಬಿಪಿಎಲ್ ಕಾರ್ಡ್ದಾರರ ಮಾದರಿಯಲ್ಲಿ ಉಚಿತವಾಗಿ ಅಕ್ಕಿಯನ್ನು ವಿತರಿಸಬೇಕೆಂಬ ಬೇಡಿಕೆಯನ್ನು ಸರಕಾರ ಈಡೇರಿಸಿಲ್ಲ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಆಹಾರ ಸಚಿವ ಗೋಪಾಲಯ್ಯ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಈಡೇರಿಸುವಂತೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.
ರಾಜ್ಯ ಸರಕಾರವು ನುಡಿದಂತೆ ನಡೆಯದೆ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ಕೋರೋನ ವೈರಸ್ ನಿಂದ ಉಂಟಾದ ಲಾಕ್ ಡೌನ್ಗೆ ಜನರು ಸಹಕರಿಸುತ್ತಿದ್ದಾರೆ. ಆದರೆ ರೇಷನ್ ನೀಡುವ ಸಂದರ್ಭದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕೆಂದು ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.