ಮಂಗಳೂರಿನ ಆಪದ್ಬಾಂಧವ ಐವನ್ ಡಿಸೋಜಾ

ಮಂಗಳೂರು : ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನದಿಂದ ಮುಕ್ತಿ ಕಾಣಲು ದೇಶದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಲಾಕ್ ಡೌನ್ಗೆ ಒಳಪಡಿಸಿದ್ದರು. ಇದರಲ್ಲಿ ಭಾರತ ಬಹುತೇಕ ಯಶಸ್ವಿಗೊಂಡರೂ, ಕೊರೊನದಿಂದ ಸಂಪೂರ್ಣ ಮುಕ್ತಿ ಕಂಡಿಲ್ಲ. ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಬಹುತೇಕ ಯಶಸ್ವಿಯಾಗಿದೆ ಮಾತ್ರವಲ್ಲದೆ ಕೋರೋನ ವೈರಸ್ ನಿಂದ ಬಚಾವ್ ಆಗಿದೆ. ಆದರೆ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕೋರೊನ ಸೋಂಕಿತರು ಪತ್ತೆಯಾಗುತ್ತಿದ್ದು ಸ್ವಲ್ಪ ಆತಂಕಕ್ಕೆ ಎಡೆ ಮಾಡಿದೆ. ಇವೆಲ್ಲದರ ನಡುವೆ ಲಾಕ್ ಡೌನ್ ನಿಂದಾಗಿ ಹಲವು ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ಬಡವರ ಪರಿಸ್ಥಿತಿ ತೀರಾ ಕೆಟ್ಟದಾಗಿದೆ.

ಲಾಕ್ ಡೌನ್ ಆರಂಭದ ದಿನದಿಂದ ಇಂದಿನವರೆಗೆ ಉಭಯ ಜಿಲ್ಲೆಗಳಲ್ಲಿ ಮಾತ್ರವಲ್ಲದೇ ದೇಶದ ವಿವಿಧ ಭಾಗದಲ್ಲಿ ದಾನಿಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು, ವಿವಿಧ ಧಾರ್ಮಿಕ ಸಂಘಟನೆಗಳು ಕಷ್ಟದಲ್ಲಿರುವವರಿಗೆ ಅಶಕ್ತರಿಗೆ ತಮ್ಮ ಸಹಾಯ ಹಸ್ತವನ್ನು ಚಾಚಿವೆ. ಇದರಿಂದ ಸಂಕಷ್ಟದಲ್ಲಿರುವವರ ಮುಖದಲ್ಲಿ ಮಂದಹಾಸ ಮೂಡಿದೆ. ಇಂತಹ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಮಂಗಳೂರಿನಲ್ಲಿ ಸದಾ ಜನರ ಸೇವೆಗೆ ಸಿದ್ಧರಾಗಿರುವ, ಜನರ ಸೇವೆಯೇ ಜನಾರ್ದನ ಸೇವೆ ಎಂಬ ಧ್ಯೇಯವನ್ನಿಟ್ಟುಕೊಂಡು ಜನಸೇವೆ ಮಾಡುತ್ತಿರುವಂತಹ ಜನನಾಯಕ ವಿಧಾನ ಪರಿಷತ್ ಐವನ್ ಡಿಸೋಜಾ, ಇಂದು ಎಲ್ಲರ ಮನೆ ಮನಸ್ಸುಗಳಲ್ಲಿ ಅಚ್ಚಳಿಯಾದೆ ಉಳಿದಿದ್ದಾರೆ.

ಸದಾ ಪಾದರಸದಂತೆ ಮಿಂಚಿನ ಸಂಚಾರವನ್ನು ಮಾಡಿ ಕಾರ್ಮಿಕ ವರ್ಗಕ್ಕೆ ಧ್ವನಿ ಆಗಿರುವಂತಹ ಐವನ್ ಡಿಸೋಜ, ಕಳೆದ 38 ದಿನಗಳಲ್ಲಿ ದಿನಪ್ರತಿ ಎಂಬಂತೆ ಕನಿಷ್ಠ 300 ಕಿಟ್ಗಳನ್ನು ವಿತರಿಸಿ, ಕಾರ್ಮಿಕ ವರ್ಗದ ಕುಟುಂಬಗಳಿಗೆ ಅಶಕ್ತರಿಗೆ ಮತ್ತು ಬಡ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ.  ವಾಲೆನ್ಸಿಯಾದಲ್ಲಿರುವ ತನ್ನ ಕಚೇರಿಯನ್ನೇ ‘ಜನತಾ ಬಜಾರ್’ ಆಗಿ ರೂಪಿಸಿ, ತನ್ನ ಕಚೇರಿಗೆ  ಸಮಸ್ಯೆಗಳಿಗೆ ಪರಿಹಾರ ಹುಡುಕಲು ಬರುವ ಕುಟುಂಬಗಳಿಗೆ ಅಕ್ಕಿ ಸಹಿತ ದಿನಸಿ ವಸ್ತುಗಳನ್ನು ವಿತರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ತನ್ನ ಧರ್ಮವನ್ನು ಲೆಕ್ಕಿಸದೆ, ಜಾತಿ ಮತ ಭೇದ ಮಾಡದೇ, ಪಕ್ಷಾತೀತವಾಗಿ ಸರ್ವರಿಗೂ ಆಧಾರ ವಾಗುತ್ತಿರುವ ಐವನ್ ಡಿಸೋಜಾ, ಹಿರಿಯ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಅನಾರೋಗ್ಯದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ, ಧೈರ್ಯ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಪಡಿತರ ಅವ್ಯವಸ್ಥೆಗಳಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಂಕಷ್ಟಗಳನ್ನು ಅರಿತಿರುವ ಐವನ್ ಡಿಸೋಜ ಪಡಿತರ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರವನ್ನು ಎಚ್ಚರಿಸುತ್ತಿದ್ದಾರೆ. ಕಳೆದ 38 ದಿನಗಳಲ್ಲಿ ಅಕ್ಕಿ ಸಹಿತ ದಿನಸಿ ವಸ್ತುಗಳ ಒಟ್ಟು 12,800 ಕಿಟ್ ಗಳನ್ನು ಅಗತ್ಯವಿರುವವರಿಗೆ ತಲುಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು, ಆರು ವರ್ಷಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಐವನ್ ಡಿಸೋಜಾ ಮೂಲತಃ ಕಾಪು ವಿಧಾನಸಭಾ ಕ್ಷೇತ್ರದ ಮುದರಂಗಡಿಯವರು. ಕಳೆದ 38 ದಿನಗಳಿಂದ ಕಷ್ಟದಲ್ಲಿರುವವರ, ಅಶಕ್ತರ, ಕಾರ್ಮಿಕರ ವಲಯಕ್ಕೆ ಆಪದ್ಬಾಂಧವನಾಗಿ ಸ್ಪಂದಿಸುತ್ತಿರುವ ಐವನ್ ಡಿಸೋಜ, ಜನಸೇವೆಗೆ ಮತ್ತೊಂದು ಹೆಸರು. ರಾಜ್ಯದ ಹಲವು ಸಚಿವರು, ಶಾಸಕರು ಕೋರೊನ ಸಂದರ್ಭಗಳಲ್ಲಿ ಜನರ ಸೇವೆಗೆ ದೊರಕದೆ ಇದ್ದರೂ, ಅವಿಭಜಿತ ಜಿಲ್ಲೆಗಳ ಬಹುತೇಕ ಎಲ್ಲ ಶಾಸಕರು ಸದಾ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲಾಕ್ ಡೌನ್ ನ ಆರಂಭದ ದಿನದಿಂದ ಇಂದಿನ ದಿನದವರೆಗೂ ಅಶಕ್ತರ, ಬಡವರ ಮತ್ತು ಕಾರ್ಮಿಕ ವರ್ಗದ ಅತಿ ದೊಡ್ಡ ಬೆನ್ನೆಲುಬಾಗಿ ನಿಂತಿದ್ದಾರೆ. ಓರ್ವ ಜನಪ್ರತಿನಿಧಿ ಯಾವ ರೀತಿ ಜನಸೇವೆ ಮಾಡಬೇಕು ಎಂಬುದಕ್ಕೆ ಸ್ಪಷ್ಟ ನಿದರ್ಶನ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ.

ಕಳೆದ 38 ದಿನಗಳಿಂದ ಲಾಕ್ ಡೌನ್ ಇದ್ದರೂ, ಮಂಗಳೂರು ದಕ್ಷಿಣ, ಮೂಡುಬಿದ್ರೆ ಸಹಿತ ಮಂಗಳೂರಿನ ವಿವಿಧ ಪರಿಸರದವರಿಗೆ ಯಾವುದೇ  ಸಮಸ್ಯೆ ಬರದ ಹಾಗೆ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಸಂಸದ, ಶಾಸಕರೊಂದಿಗೆ ಮತ್ತು ವಿಶೇಷವಾಗಿ ಮುಖ್ಯಮಂತ್ರಿಯವರೊಂದಿಗೆ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಾಣಲು ಬಹಳಷ್ಟು ಯಶಸ್ವಿಯಾಗಿದ್ದಾರೆ. ಕಾರ್ಮಿಕ ವರ್ಗದ ಅತಿ ದೊಡ್ಡ ಧ್ವನಿಯಾಗಿರುವ ಐವನ್ ಡಿಸೋಜ, ರಿಕ್ಷಾ, ಬಸ್ಸು, ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಸದಾ ಸ್ಪಂದನೆ ನೀಡುತ್ತಾರೆ. ಕೋರನ ಲಾಕ್ ಡೌನ್ ಸಂದರ್ಭಗಳಲ್ಲೂ ಈ ಕಾರ್ಮಿಕ ವರ್ಗದ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕೆಂದು ಹಲವು ಬಾರಿ ಮನವಿ ಮಾಡಿದ್ದಾರೆ.


ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖ ನಾಯಕರ ಅತಿ ದೊಡ್ಡ ಕನಸು ಶಾಸಕರಾಗಬೇಕು. ವಿಧಾನ ಪರಿಷತ್ ಸದಸ್ಯ ಸ್ಥಾನ ಸಿಕ್ಕಿದರೂ ಆ ನಾಯಕರುಗಳಿಗೆ ಸಮಾಧಾನ ಇರುವುದೇ ಇಲ್ಲ. ಆದರೆ ವಿಧಾನಪರಿಷತ್ ಸದಸ್ಯರಾಗಿದ್ದುಕೊಂಡು ಜನಸೇವೆ ಮಾಡಬಹುದು ಎಂಬುದನ್ನು ರಾಜ್ಯದ ಜನತೆಗೆ ತೋರಿಸಿಕೊಟ್ಟವರು ಐವನ್ ಡಿಸೋಜಾ. ಮುಂದಿನ ತಿಂಗಳು ವಿಧಾನ ಪರಿಷತ್ ಸದಸ್ಯತ್ವ  ಕೊನೆಗೊಳ್ಳುತ್ತಿರುವ ಐವನ್ ಡಿಸೋಜರವರ, ಕಳೆದ ಆರು ವರ್ಷಗಳಲ್ಲಿ ತನ್ನ ಅವಧಿಯಲ್ಲಿ ಮಾಡಿದಂತಹ ಕೆಲಸ ನಿಜಕ್ಕೂ ಅತ್ಯದ್ಭುತ.

ಕಾರ್ಮಿಕ ವರ್ಗ ಮತ್ತು ಬಡವರ ಸಂಕಷ್ಟಗಳನ್ನು ಅರಿತಿರುವ ಐವನ್ ಡಿಸೋಜಾ ಕಳೆದ 38 ದಿನಗಳಿಂದ ಸಂಕಷ್ಟದಲ್ಲಿರುವ ಹಲವು ಕುಟುಂಬಗಳಿಗೆ ಆಪತ್ಬಾಂಧವರಾಗಿದ್ದಾರೆ. ದಿನ ಬೆಳಗಾದರೆ ಸಾಕು, ತನ್ನ ಮನೆಗೆ ಬರುತ್ತಿರುವಂತಹ ಕನಿಷ್ಠ 200 ಬಡ ಕುಟುಂಬಗಳಿಗೆ, ಸಂಕಷ್ಟದಲ್ಲಿರುವವರಿಗೆ ಅಕ್ಕಿ ಸಹಿತ ದಿನಸಿ ವಸ್ತುಗಳನ್ನು ವಿತರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮಾತ್ರವಲ್ಲದೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ಎಲ್ಲಾ ಪರಿಸರಕ್ಕೆ ಭೇಟಿ ನೀಡಿ ದಿನಪ್ರತಿ ಎಂಬಂತೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ಹಸ್ತಾಂತರಿಸಿ ಜನರ ಕಷ್ಟಗಳಲ್ಲಿ ನೆರವಾಗುತ್ತಿದ್ದಾರೆ. 

ವಿಧಾನ ಪರಿಷತ್ ನಲ್ಲಿ ಸದಾ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳನ್ನು, ಮತ್ತು ರಾಜ್ಯ ವ್ಯಾಪ್ತಿಯ ಸಮಸ್ಯೆಗಳನ್ನು ಸರಕಾರಕ್ಕೆ ಮನವರಿಕೆ ಮಾಡುತ್ತಿರುವ ಐವನ್ ಡಿಸೋಜ ಎಲ್ಲ ರಾಜಕಾರಣಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಆದರ್ಶ. ತನಕ ವೈಯಕ್ತಿಕ ನೆಲೆಯಿಂದ ಜಿಲ್ಲೆಯ ಬಹಳಷ್ಟು ಕುಟುಂಬಗಳ ಆಧಾರ ಸ್ತಂಭವಾಗಿರುವ ಐವನ್ , ತಾನು ಜನ್ಮ ಪಡೆದ ಉಡುಪಿ ಜಿಲ್ಲೆಯ ಮುದರಂಗಡಿಗೆ ತನ್ನ ಸಹೋದರ ತಾಲೂಕು ಪಂಚಾಯತ್ ಸದಸ್ಯ ಮೈಕಲ್ ಡಿಸೋಜರವರ ಮೂಲಕವೂ ಹಲವು ಕಿಟ್ ಗಳ ವಿತರಣೆ ಮಾಡಿದ್ದಾರೆ. ಕಾರ್ಮಿಕ ದಿನದಂದು ಕಾರ್ಮಿಕರಿಗೆ ಮತ್ತು ರಿಕ್ಷಾ ಚಾಲಕರಿಗೆ ಅಭಿನಂದಿಸುವ ಕೆಲಸವನ್ನು ಮಾಡಿರುವ ಐವನ್, ಮತ್ತೊಮ್ಮೆ ವಿಧಾನ ಪರಿಷತ್ನ ಅಥವಾ ವಿಧಾನಸಭೆಯ ಸದಸ್ಯರಾಗಲಿ ಎಂಬ ಜನಸಾಮಾನ್ಯರ ಆಶಯ.

Leave a Reply

Your email address will not be published. Required fields are marked *

error: Content is protected !!