ಪೇಜಾವರಶ್ರೀ ಆರೋಗ್ಯ ಸುಧಾರಿಸಲು ತುಂಬಾ ಸಮಯ ಬೇಕಾಗಬಹುದು: ಡಾ.ಸತ್ಯನಾರಾಯಣ

ಉಡುಪಿ: ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದು ಚಿಕಿತ್ಸೆಗೆ ನಿಧಾನವಾಗಿ ಸ್ಪಪಂದಿಸು ಆರೋಗ್ಯ ಸ್ಥಿತಿ ಸುಧಾರಿಸಲು ತುಂಬಾ ಸಮಯ ಬೇಕಾಗಬಹುದು ಎಂದು ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ತಜ್ಞ ವೈದ್ಯರಾದ ಸತ್ಯನಾರಾಯಣ ತಿಳಿಸಿದರು.


ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವೈದ್ಯರು, ಆಸ್ಪತ್ರೆಗೆ ದಾಖಲಾದ ದಿನಕ್ಕೆ ಹೋಲಿಸಿದರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಆದರೂ ಆರೋಗ್ಯಸ್ಥಿತಿ ಗಂಭೀರವಾಗಿಯೇ ಇದೆ. ವಯಸ್ಸಿನ ಕಾರಣಕ್ಕೆ ಚಿಕಿತ್ಸೆಗೆ ನಿಧಾನಗತಿಯ ಸ್ಪಂದನೆ ಸಿಗುತ್ತಿದೆ ಎಂದರು.

ಸ್ಕ್ಯಾನಿಂಗ್, ಎಕ್ಸ್‌ರೇ, ಎಂಆರ್‌ಐ, ರಕ್ತ ಪರೀಕ್ಷೆ ಸೇರಿದಂತೆ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗಿದೆ.  ಚಿಕಿತ್ಸಾ ಕ್ರಮಗಳ ಕುರಿತು ದೆಹಲಿಯ ಏಮ್ಸ್‌ ವೈದ್ಯರ ಜತೆಗೆ ಗಂಟೆಗೊಮ್ಮೆ ಮಾಹಿತಿ ವಿನಿಮಯ ನಡೆಯುತ್ತಿದೆ. ಇಲ್ಲಿನ ಚಿಕಿತ್ಸೆಯ ಬಗ್ಗೆ ಏಮ್ಸ್‌ ವೈದ್ಯರಿಗೆ ಸಹಮತ ಇದೆ ಎಂದು ತಿಳಿಸಿದರು.

ಸ್ವಾಮೀಜಿ ಆಸ್ಪತ್ರೆಗೆ ದಾಖಲಾದಾಗ ನ್ಯುಮೋನಿಯಾ ಸೇರಿ ಹಲವು ತೆರೆನಾದ ಸಮಸ್ಯೆಗಳು ಕಂಡುಬಂದಿತ್ತು. ಈಗ ಶ್ವಾಸಕೋಶ ಸೋಂಕು ಹೊರತುಪಡಿಸಿ ಬೇರೆ ಸಮಸ್ಯೆಗಳು ಇಲ್ಲ. ಸಂಪೂರ್ಣ ಚೇತರಿಕೆವರೆಗೂ ಚಿಕಿತ್ಸೆ ಮುಂದುವರಿಯಲಿದೆ ಎಂದು ವೈದ್ಯರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಣಿಪಾಲ ಕೆಎಂಸಿ ಡೀನ್ ಡಾ. ಶರತ್ ರಾವ್, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತಜ್ಞ ವೈದ್ಯ ಡಾ. ರಾಜೇಶ್ ಶೆಟ್ಟಿ, ಶ್ವಾಸಕೋಶ ವಿಭಾಗದ ತಜ್ಞ ವೈದ್ಯ ಡಾ. ಸತ್ಯನಾರಾಯಣ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡಾ. ಮಂಜುನಾಥ ಹಂದೆ, ಡಾ. ವಿಶಾಲ್ ಶಾನುಭಾಗ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!