ಕಾನೂನು ಪಾಲಿಸದವರು ದೇಶ ಬಿಟ್ಟು ಹೋಗುವುದು ಉತ್ತಮ: ಸುಪ್ರೀಂ ಕೋರ್ಟ್

ನವದೆಹಲಿ: ದೂರಸಂಪರ್ಕ ಇಲಾಖೆಗೆ  ಸುಮಾರು 1.47 ಲಕ್ಷ ಕೋಟಿ ರೂಪಾಯಿ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ ಪಾವತಿ ಮಾಡಬೇಕೆಂಬ ಆದೇಶವನ್ನು ಪಾಲಿಸದಿರುವ ಟೆಲ್ಕೊಸ್ ಮತ್ತು ಇತರ ಟೆಲಿಕಾಂ ಕಂಪೆನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಏಕೆ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.


ನ್ಯಾಯಾಲಯದ ಆದೇಶವನ್ನು ಪಾಲಿಸದ ಟೆಲಿಕಾಂ ಕಂಪೆನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಸುಪ್ರೀಂ ಕೋರ್ಟ್ ಎಜಿಆರ್ ಶುಲ್ಕ ಪಾವತಿ ವಿಚಾರದಲ್ಲಿ ತನ್ನ ಆದೇಶಕ್ಕೆ ತಡೆಯೊಡ್ಡಿರುವ ದೂರಸಂಪರ್ಕ ಇಲಾಖೆಯ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.


ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್. ಅಬ್ದುಲ್ ನಜೀರ್ ಮತ್ತು ಎಂ. ಆರ್. ಶಾ ಅವರನ್ನೊಳಗೊಂಡ ನ್ಯಾಯಪೀಠ, ಈ ಕೇಸಿನಲ್ಲಿ ಯಾರು ಅವಿವೇಕ ತೋರಿಸುತ್ತಿದ್ದಾರೆ ಎಂದು ಗೊತ್ತಿಲ್ಲ. ಈ ದೇಶದಲ್ಲಿ ಕಾನೂನು ಉಳಿದಿಲ್ಲವೇ, ಕಾನೂನು ಪಾಲಿಸದಿರುವವರು ಈ ದೇಶ ಬಿಟ್ಟು ಹೋಗುವುದು ಉತ್ತಮ ಎಂದು ಛೀಮಾರಿ ಹಾಕಿದೆ.


”ದೂರ ಸಂಪರ್ಕ ಇಲಾಖೆಯ ಡೆಸ್ಕ್ ಅಧಿಕಾರಿಯನ್ನು ಇಲ್ಲಿಗೆ ಕರೆಯಿರಿ, ಏನು ಸುಪ್ರೀಂ ಕೋರ್ಟ್ ಬಾಗಿಲು ಹಾಕಿಕೊಂಡು ಹೋಗಬೇಕು ಎಂದು ನೀವು ಭಾವಿಸಿದ್ದೀರಾ? ಈ ರೀತಿ ವರ್ತನೆ ತೋರಿಸಿದರೆ ನಾವು ಎಲ್ಲರ ವಿರುದ್ಧ ನ್ಯಾಯಾಂಗ ನಿಂದನೆ ನೊಟೀಸ್ ಹೊರಡಿಸುತ್ತೇವೆ” ಎಂದು ನ್ಯಾಯಾಧೀಶ ಮಿಶ್ರಾ ಕೋರ್ಟ್ ಹಾಲ್ ನಲ್ಲಿ ಆಕ್ರೋಶದಿಂದ ನುಡಿದರು.


”ಎಜಿಆರ್ ಶುಲ್ಕ ಪಾವತಿಸುವಂತೆ ಟೆಲ್ಕೊಸ್ ಮತ್ತು ಇತರ ಕಂಪೆನಿಗಳ ಮೇಲೆ ಒತ್ತಡ ಹೇರಬಾರದು ಮತ್ತು  ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಅಟೊರ್ನಿ ಜನರಲ್ ಮತ್ತು ಇತರ ಸಾಂವಿಧಾನಿಕ ಸಂಸ್ಥೆ ಅಧಿಕಾರಿಗಳಿಗೆ ದೂರ ಸಂಪರ್ಕ ಇಲಾಖೆಯ ಡೆಸ್ಕ್ ಆಫೀಸರ್ ಒಬ್ಬರು ಪತ್ರ ಬರೆಯುತ್ತಾರೆ ಎಂದರೆ ಏನರ್ಥ” ಎಂದು ನ್ಯಾಯಾಧೀಶರು ಕೋಪದಿಂದ ಕೇಳಿದರು.


ಟೆಲಿಕಾಂ ಕಂಪೆನಿಗಳ ಪರವಾನಗಿ ಶುಲ್ಕ, ಸ್ಪೆಕ್ಟ್ರಮ್ ಬಳಕೆ ಶುಲ್ಕ ಮತ್ತು ತೆರಿಗೆಗಳನ್ನು ಎಜಿಆರ್ ಮೂಲಕ ನಿರ್ಧರಿಸಲಾಗುತ್ತದೆ. ಎಜಿಆರ್ ರಚನೆ ಬಗ್ಗೆ ದೂರ ಸಂಪರ್ಕ ಇಲಾಖೆ ಮತ್ತು ಟೆಲಿಕಾಂ ಕಂಪೆನಿಗಳ ನಡುವಿನ 14 ವರ್ಷಗಳ ಕಾನೂನು ಹೋರಾಟಕ್ಕೆ ಕಳೆದ ವರ್ಷ ಅಕ್ಟೋಬರ್ 24ರಂದು ಕೊನೆಗೂ ಸುಪ್ರೀಂ ಕೋರ್ಟ್ ಅಂತ್ಯಹಾಡಿತ್ತು. 


ಭಾರತೀಯ ದೂರ ಸಂಪರ್ಕ ಇಲಾಖೆಗೆ ಜಿಯೊ ಕಂಪೆನಿ ಮಾತ್ರ 60 ಸಾವಿರ ಕೋಟಿ ರೂಪಾಯಿ ಬಾಕಿ ಶುಲ್ಕವನ್ನು ಪಾವತಿ ಮಾಡಿದೆಯಷ್ಟೆ. ವೊಡಫೋನ್ ಐಡಿಯಾ 50 ಸಾವಿರ ಕೋಟಿ ರೂಪಾಯಿ, ಭಾರ್ತಿ ಏರ್ ಟೆಲ್ 35 ಸಾವಿರದ 586 ಕೋಟಿ ರೂ., ಮೊಬೈಲ್ ಸರ್ವಿಸ್ ಉದ್ಯಮವನ್ನು ಏರ್ ಟೆಲ್ ಗೆ ಮಾರಾಟ ಮಾಡಿದ ಟಾಟಾ ಟೆಲಿಸರ್ವಿಸಸ್ 14 ಸಾವಿರ ಕೋಟಿ ರೂಪಾಯಿ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿವೆ.  ರಾಷ್ಟ್ರೀಯ ಟೆಲಿಕಾಂ ನೀತಿಯಡಿ 1994ರಲ್ಲಿ ದೂರಸಂಪರ್ಕ ವಲಯವನ್ನು ಉದಾರೀಕರಣಗೊಳಿಸಲಾಯಿತು. ನಂತರ ನಿಶ್ಚಿತ ಪರವಾನಗಿ ಶುಲ್ಕದ ಮೂಲಕ ಟೆಲಿಕಾಂ ಕಂಪೆನಿಗಳಿಗೆ ಪರವಾನಗಿ ನೀಡಲು ಸರ್ಕಾರ ಆರಂಭ ಮಾಡಿತು. ಸ್ಥಿರ ಪರವಾನಗಿ ಶುಲ್ಕದಿಂದ ಬಿಡುಗಡೆ ಹೊಂದಲು ಕೇಂದ್ರ ಸರ್ಕಾರ 1999ರಲ್ಲಿ ಆದಾಯ ಹಂಚಿಕೆ ಶುಲ್ಕ ವಿಧಾನಕ್ಕೆ ಪರವಾನಗಿಯನ್ನು ವರ್ಗಾಯಿಸಿಕೊಳ್ಳುವ ಅವಕಾಶವನ್ನು ಕಂಪೆನಿಗಳಿಗೆ ನೀಡಿತು.


ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಿ ಸರ್ಕಾರಕ್ಕೆ ಕಂಪೆನಿಗಳು ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅದನ್ನು ವಾರ್ಷಿಕ ಪರವಾನಗಿ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಸಹ ಬಳಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

Leave a Reply

Your email address will not be published. Required fields are marked *

error: Content is protected !!