ಇಂತಹ ಸಮಯದಲ್ಲಿ ಮದ್ಯ ಮಾರಾಟ ಬೇಕಿತ್ತಾ?ಜನಸಾಮಾನ್ಯರ ಆಕ್ರೋಶ : ವಿಪಕ್ಷ ಫುಲ್ ಸೈಲೆಂಟ್
ಉಡುಪಿ : ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದ ಸರಕಾರವು ಈಗ ಆದಾಯ ಗಳಿಕೆಯ ದೃಷ್ಟಿಯಿಂದ ಅದಕ್ಕೆ ಅನುಮತಿ ನೀಡಿದೆ. ಆದರೆ ಇದರಿಂದ ಸಿಗುವ ಆದಾಯಕ್ಕಿಂತ ಮದ್ಯಪಾನಿಗಳ ಆರೋಗ್ಯಕ್ಕಾಗಿ ಸರಕಾರ ಮಾಡುವ ಖರ್ಚು ಹೆಚ್ಚಿದೆ. ಮಾತ್ರವಲ್ಲದೇ ಮೊದಲೇ ಕಷ್ಟದಲ್ಲಿದ್ದ ಕುಟುಂಬಗಳು ಈಗ ಬೀದಿ ಪಾಲಾಗುವ ಆತಂಕ ಹೆಚ್ಚಾಗುತ್ತಿದೆ. ಆದರೆ ವಿಪಕ್ಷಗಳು ಸೈಲೆಂಟ್ ಆಗಿರುವುದು ಮದ್ಯ ಮಾರಾಟಕ್ಕೆ ಬೆಂಬಲ ನೀಡಿದಂತಿದೆ.
ಸರಕಾರ ಮದ್ಯ ಮಾರಾಟವನ್ನು ಕೇವಲ ಆರ್ಥಿಕ ದೃಷ್ಟಿಯಿಂದ ಮಾತ್ರ ಪರಿಗಣಿಸುತ್ತದೆ. ಆದರೆ ಇದರಿಂದ ಸಮಾಜದಲ್ಲಿ ಆಗುವ ಅನಾಹುತಗಳು, ಕೌಟುಂಬಿಕನೆಮ್ಮದಿ ಹಾಳು, ಅಪರಾಧ ಪ್ರಕರಣಗಳಾದ ಕಳ್ಳತನ, ದರೋಡೆ, ಅಪಘಾತಗಳಸಂಖ್ಯೆ ಹೆಚ್ಚಾಗುತ್ತದೆ. ಕುಡಿತದಿಂದ ಆರೋಗ್ಯ ಹಾಳು ಮಾಡಿಕೊಂಡವರ ಆರೋಗ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತದಂಥ ಯೋಜನೆಗಳ ಅಡಿಯಲ್ಲಿ ಮಾಡುವ ವೆಚ್ಚ ಮದ್ಯ ಮಾರಾಟದಿಂದ ಬರುವ ಆದಾಯಕ್ಕಿಂತ ಎರಡು ಪಟ್ಟು ಹೆಚ್ಚು ಎನ್ನುವುದು ತಜ್ಞರ ಅಭಿಪ್ರಾಯ.
ಮದ್ಯ ಮಾರಾಟ ಇರದೇ ಇದ್ದರಿಂದ ಬಹಳಷ್ಟು ಕುಟುಂಬಗಳು ಕಳೆದ ನಲವತ್ತು ದಿನಗಳಿಂದ ನೆಮ್ಮದಿಯ ಉಸಿರನ್ನು ಬಿಟ್ಟಿದ್ದವು. ಆದರೆ ಸಂಕಷ್ಟದ ಸಮಯದಲ್ಲಿ ಮತ್ತೆ ಹಲವಾರು ಕುಟುಂಬಗಳು ಬೀದಿಪಾಲಾಗುವ ಆತಂಕವನ್ನು ಸೃಷ್ಟಿಯಾಗಿದೆ. ಕಳೆದ ನಲವತ್ತು ದಿನಗಳಲ್ಲಿ ಬಹಳಷ್ಟು ಕುಟುಂಬಗಳ ಮಹಿಳೆಯರು ಮಕ್ಕಳು ಸಂತೋಷದಿಂದಿದ್ದರೆ, ಇದೀಗ ಮತ್ತೆ ಆ ಮನೆಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಿದಂತಹ ರಾಜ್ಯ ಸರಕಾರದ ಮೇಲೆ ಜನರ ಆಕ್ರೋಶ ಭುಗಿಲೆದ್ದಿದೆ. ಮಧ್ಯಮ ವರ್ಗ ಸಹಿತ ಬಡ ಕುಟುಂಬಗಳಿಗೆ ಲಾಕ್ ಡೌನ್ ಸಮಯದಲ್ಲಿ ಯಾವುದೇ ಪ್ಯಾಕೇಜನ್ನು ಘೋಷಿಸದ ರಾಜ್ಯ ಸರಕಾರ, ಇದೀಗ ಕುಟುಂಬಗಳನ್ನು ಹಾಳು ಮಾಡಬಲ್ಲಂತಹ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದ್ದು ನಿಜಕ್ಕೂ ದುರಾದೃಷ್ಟ ಎನ್ನುತ್ತಿದ್ದಾರೆ ಜನಸಾಮಾನ್ಯರು.
ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದೇ ತಡ, ಬಹಳಷ್ಟು ಮದ್ಯವ್ಯಸನಿಗಳು ವೈನ್ ಶಾಪಿನ ಮುಂದುಗಡೆ ನಿನ್ನೆ ರಾತ್ರಿಯಿಂದಲೇ ಕಾವಲುಗಾರರಂತೆ ನಿಂತು ಕೊಂಡದ್ದನ್ನು ನಾವೆಲ್ಲರೂ ಗಮನಿಸಿದ್ದೇವೆ. ಕೆಲವೊಂದು ವೈನ್ಶಾಪ್ಗಳಲ್ಲಿ ಹೆಲ್ಮೆಟ್, ಚಪ್ಪಲಿಗಳನ್ನು ಇಟ್ಟುಕೊಂಡು ತಮ್ಮ ಸರದಿಗಾಗಿ ಕಾಯುತ್ತಿದ್ದ ಜನರು, ಮತ್ತೊಂದು ಕಡೆ ಕೆಲವೊಂದು ಜನರು ತಾವು ನಿಲ್ಲದೆ ಕೂಲಿ ಕಾರ್ಮಿಕರನ್ನು ಅಥವಾ ಇನ್ಯಾರನ್ನೋ ನಿಲ್ಲಿಸಿಕೊಂಡು ತಮ್ಮ ಬೇಳೆ ಬೇಯಿಸಿ ಕೊಂಡಿದ್ದನ್ನು ನೋಡಿದ್ದೇವೆ.
ರಾಜ್ಯ ಸರಕಾರದ ಇಂತಹ ನಿರ್ಧಾರಗಳಿಗೆ ಎಚ್ಚರಿಕೆ ನೀಡಬೇಕಾಗಿದ್ದ ಅಥವಾ ವಿರೋಧಿಸ ಬೇಕಾಗಿದ್ದ ವಿಪಕ್ಷಗಳು ಮಾತ್ರ ಸೈಲೆಂಟ್ ಆಗಿರುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಿದೆ. ವಿದ್ಯಾವಂತರ ಜಿಲ್ಲೆಗಳಲ್ಲಿ ವೈನ್ ಶಾಪ್ಗಳ ಮುಂದೆ ಸರದಿ ಕಾಯುತ್ತಿರುವುದು ಸಭ್ಯರಿಗೆ ಯಾಕೋ ಮುಜುಗರವಾಗದಂತೆ ಇದೆ. ಕೆಲವೊಂದು ವೈನ್ ಶಾಪ್ ಗಳಲ್ಲಿ ಒಂದರಿಂದ ಎರಡು ಕಿಲೋಮೀಟರ್ ವರೆಗೂ ಕೂಡ ಜನರು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಕೆಲವೊಂದು ಕಡೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇರುವುದು, ಮಾಸ್ಕ್ಗಳನ್ನು ಹಾಕದೇ ಇರುವುದು ನಿಯಮ ಉಲ್ಲಂಘಿಸಿ ದಂತಿದೆ.
ಮದ್ಯ ಮಾರಾಟ ಪುನರಾರಂಭ ಮಾಡಿರುವ ರಾಜ್ಯ ಸರಕಾರದ ನಿರ್ಧಾರವನ್ನು ನಾಡಿನ ಪ್ರಮುಖ ಸ್ವಾಮೀಜಿಗಳು ವಿರೋಧಿಸಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸಾಣೇಹಳ್ಳಿ ಮಠದ ಪೀಠಾಧ್ಯಕ್ಷ ಪಂಡಿತಾರಾಧ್ಯಶಿವಾಚಾರ್ಯ ಸ್ವಾಮೀಜಿ, ಗದಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ಸಿದ್ದರಾಮ ಸ್ವಾಮೀಜಿ, ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮಾಜಿ ಸಚಿವ ಎಚ್ ಕೆ ಪಾಟೀಲ್ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ಆದರೆ ಉಭಯ ಜಿಲ್ಲೆಗಳ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ವಿರೋಧ ಮಾಡದೇ ಇರುವುದು ದುರಾದೃಷ್ಟ.