ಸ್ವಾಮೀಜಿಗಳಿಂದಲೇ ಬಡ್ಡಿ ವ್ಯವಹಾರ: ಕೇಮಾರು ಶ್ರೀ
ಬೆಳ್ಮಣ್: ಜೈನ, ಬೌಧ, ಹಿಂದೂ ಧರ್ಮಗಳು ಭಾರತೀಯ ಸಂಸ್ಕೃತಿಯ ಮೂರು ಕವಲುಗಳು. ಧಾರ್ಮಿಕ ಸಂತರಿಂದ ಭಾರತೀಯ ಸಂಸ್ಕೃತಿ ಉಳಿದಿದ್ದು, ಸಂಸ್ಕೃತಿಯ ಏಕತೆ ಸಾಧಿಸುವುದು ಸ್ವಾಮೀಜಿಗಳ ಕೈಯಲ್ಲಿದೆ. ಮನುಷ್ಯ ತಾಮಸ ಗುಣಗಳನ್ನು ಬಿಟ್ಟು ಸನ್ನಡತೆಯ ಜೀವನ ನಡೆಸಿದಲ್ಲಿ ಮಾತ್ರ ದೇವರು ಪ್ರಸನ್ನರಾಗಲು ಸಾಧ್ಯ ಎಂದು ಮೂಡಬಿದ್ರೆ ಜೈನ ಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾ ಸ್ವಾಮೀಜಿ ಹೇಳಿದರು.
ಅವರು ಸಚ್ಚೇರಿಪೇಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ವತಿಯಿಂದ ಶನಿವಾರ ನಡೆದ ೧೬ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಮಂಡ್ಯ ಜಿಲ್ಲೆಯ ಆರತಿಪುರ ಜೈನ ಮಠದ ಸ್ವಸ್ತಿ ಶ್ರೀ ಸಿದ್ಧಾಂತ ಕೀರ್ತಿ ಶ್ರೀಗಳು ಆಶೀರ್ವಚನ ನೀಡಿ ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿಯಲ್ಲಿ ದೇವರನ್ನು ಕಾಣಲು ಸಾದ್ಯ ಎಂದರು. ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ತುಳು ಜಾನಪದ ವಿಧ್ವಾಂಸ ಕೆ.ಕೆ ಪೇಜಾವರ ಮಾತನಾಡಿ ತುಳುನಾಡಿನ ಬದುಕಿನಲ್ಲಿ ಅದೆಷ್ಟೋ ಅದ್ಬುತ ವಿಚಾರಗಳಿದ್ದು, ನಮ್ಮ ಬದುಕು ಎಲ್ಲಾ ಕಡೆಗಳಿಗಿಂತ ಭಿನ್ನವಾಗಿದೆ ಎಂದರು. ವಾಗ್ಮಿ ಚೈತ್ರಾ ಕುಂದಾಪುರ ದಿಕ್ಸೂಚಿ ಭಾಷಣ ಮಾಡಿದ್ದು, ಬದುಕಿಗೆ ದಾರಿ ತೋರುವುದೇ ಧರ್ಮ. ಧರ್ಮಕ್ಕಾಗಿ ಎಲ್ಲರೂ ಒಂದಾಗುವ ಅನಿವಾರ್ಯತೆಯನ್ನು ಸದ್ಯದ ಪರಿಸ್ಥಿತಿ ತಂದೊಡ್ಡಿದೆ. ಸಂಸ್ಕೃತಿ ಹೀನ ಬದುಕು ಯಾರಿಗೂ ಒಳಿತಲ್ಲ. ದೇಶದ ನೆಲದ ಮಣ್ಣಿನ ಮತ್ತು ಪರಂಪರೆಯ ಜೊತೆ ಬದುಕು ಸಾಗಿಸುವುದೇ ನಿಜವಾದ ಸಂಸ್ಕೃತಿ ಬದುಕಿಗೆ ಸಂಸ್ಕೃತಿ-ಸಂಪ್ರದಾಯಗಳೇ ಗುರಿಯಾಗಬೇಕು. ಎಲ್ಲಾ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸಚ್ಚೇರಿಪೇಟೆ ಸುಧೀರ್ ನಾಯಕ್ ಮತ್ತು ಕಾರ್‍ಯಕ್ರಮದ ಮಹದಾನಿ ಬೋಜ ಸುವರ್ಣ ದಂಪತಿಯನ್ನು ಸನ್ಮಾನಿಸಲಾಯಿತು. ಬಜರಂಗದಳ ಪ್ರಮುಖರಾದ ಮಹೇಶ್ ಶೆಣೈ ಬೈಲೂರು, ಚೇತನ್ ಪೇರಲ್ಕೆ, ವಿಶ್ವ ಹಿಂದೂ ಪರಿಷತ್‌ನ ಬೆಳ್ಮಣ್ ವಲಯದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ವಿಜಯ ಮುಕ್ಕಡಪ್ಪು, ಜಿತೇಂದ್ರ ಪೇರೂರು ಉಪಸ್ಥಿತರಿದ್ದರು. ಟ್ರಸ್ಟ್‌ನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ ಸ್ವಾಗತಿಸಿ ವಂದಿಸಿದರು. ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.
ಸ್ವಾಮೀಜಿಗಳಿಂದಲೇ ಬಡ್ಡಿ ವ್ಯವಹಾರ-ಕೇಮಾರು ಶ್ರೀ
ಸಭೆಯಲ್ಲಿ ದಾರ್ಮಿಕ ಪ್ರವಚನ ನೀಡಿದ ಟ್ರಸ್ಟ್‌ನ ಗೌರವಾಧ್ಯಕ್ಷ ಕೇಮಾರು ಈಶ ವಿಠ್ಠಲದಾಸ ಶ್ರೀಗಳು ನಕಲಿ ಸಂತರಿಂದ ಧರ್ಮ ಉಳಿಯಲು ಸಾದ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಹಿಂದೂ ಸಮಾಜ ದಾರ್ಮಿಕ ಮೌಲ್ಯಗಳಿಗೆ ಬೆಲೆ ಕೊಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾವಿ ಹಾಕಿರುವ ಸ್ವಾಮೀಜಿಗಳೂ ಹಣದ ಆಸೆಗಾಗಿ ದೇವರ ಗುಡಿ ಮುಂದೆ ಆವೇಶ ಬಂದಂತೆ ವರ್ತಿಸಿ, ಭಕ್ತರನ್ನ ಮರುಳು ಮಾಡುವ ಜೊತೆ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ.
ಸಂಪಾದನೆಯಾದ ಹಣವನ್ನು ಬಡ್ಡಿ ದಂದೆಗೆ ಬಳಸಿಕೊಂಡು ಮಠ ದೇವಸ್ಥಾನ ನಿರ್ಮಿಸುವ ಕಾವಿಗಳ ಬಗ್ಗೆ ಜನ ಎಚ್ಚರವಹಿಸಬೇಕೆಂದ ಅವರು, ಮಹಾನ್ ಸಂತರುಗಳ ಮೈ ಮೇಲೆ ದೇವರು ಬಂದ ನಿರ್ದರ್ಶನಗಳಿಲ್ಲ. ನಡೆದಾಡುವ ದೇವರೆನಿಸಿಕೊಂಡ ಸಿದ್ದಗಂಗಾ ಶ್ರೀ, ಉಡುಪಿ ಅಷ್ಟಮಠಗಳ ಇತಿಹಾಸ ಸೇರಿರುವ ೨೪೫ ಸಂತರು ಯಾರೂ ಕೂಡ ಮೈ ನಡುಗಿಸಿ ಭಕ್ತರನ್ನು ಮರುಳು ಮಾಡಿಲ್ಲ. ಇತ್ತೀಚೆಗೆ ಕೆಲ ಸ್ವಾಮಿಗಳು ಆವೇಶದ ನಾಟಕವಾಡಿ, ಮೈಮೇಲೆ ದರ್ಶನ ಬಂದಂತೆ ವರ್ತಿಸಿ ಆಸ್ತಿ ಜೊತೆ ಹಣ ಸಂಪಾದನೆಯಲ್ಲಿ ತೊಡಗಿರುವುದು ಸಂತ ಪರಂಪರೆಗೆ ಕಳಂಕ ಎಂದರು.