ಲಾಕ್ ಡೌನ್: ಅಸಹಾಯಕರಿಗೆ ಮಿಡಿಯುತ್ತಿರುವ ಉಡುಪಿಯ ಸಹೃದಯಿಗಳು

ಉಡುಪಿ: (ಉಡುಪಿ ಟೈಮ್ಸ್ ವರದಿ) ದೇವಾಲಯಗಳ ನಾಡಾದ ಉಡುಪಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾದ ಬಗ್ಗೆ ವಿಶೇಷ ಜಾಗೃತಿಯನ್ನು ಉಡುಪಿ ಜಿಲ್ಲಾಧಿಕಾರಿ ನೇತೃತ್ವದ ತಂಡ ಸಮರೋಪಾದಿಯಲ್ಲಿ ಮಾಡುತ್ತಲೇ ಇದೆ. ಜಿಲ್ಲಾಧಿಕಾರಿ ಅವರ ಉತ್ಸಾಹಕ್ಕೆ ನಾಗರಿಕರು ಉತ್ತಮ ರೀತಿಯಲ್ಲಿ ಸಾಥ್ ಕೊಡುತ್ತಲೆ ಇದ್ದಾರೆ. ಜನರ ಮುನ್ನೆಚ್ಚರಿಕೆಯ ನಡುವೆಯೂ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಕೊರೊನ ವೈರಸ್ ಸೋಂಕು ಪ್ರಕರಣ ದಾಖಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 21 ದಿನಗಳು ಭಾರತ ಲಾಕ್ ಡೌನ್ ಆಗಲಿದೆ ಎಂದು ಘೋಷಿಸಿದ್ದಾರೆ.

ಉಡುಪಿ ಜಿಲ್ಲೆ ಸೌಹಾರ್ದತೆಗೆ ವಿಶೇಷ ನೆಲೆಯನ್ನು ಕೊಟ್ಟಿದೆ. ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಬಂದರೂ ಕೂಡ, ಸರ್ವಧರ್ಮೀಯರು ಅಥವಾ ವಿವಿಧ ರಾಜಕೀಯ ಮುಖಂಡರು ಸಮಸ್ಯೆಯನ್ನು ಬಗೆಹರಿಸುತ್ತಾರೆ. ಮಹಾಮಾರಿ ಕೊರೋನಾ ವೈರಸ್ ದೇಶಕ್ಕೆ ಕಾಲಿಟ್ಟ ಬಳಿಕ ಉಡುಪಿ ಜಿಲ್ಲೆ ಇತರ ಜಿಲ್ಲೆಗೆ ಆದರ್ಶವಾಗುತ್ತದೆ. ಇದಕ್ಕೆಲ್ಲ ಮುಂಚೂಣಿ ಎಂಬಂತೆ ಜಿಲ್ಲಾಧಿಕಾರಿ ಬಹಳಷ್ಟು ಉತ್ಸುಕತೆಯಿಂದ ಜನರಿಗೆ ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದ್ದಾರೆ. ಬಹಳಷ್ಟು ಮಾಲ್ ಮತ್ತು ದಿನಸಿ ಅಂಗಡಿಗಳಿಗೆ ಭೇಟಿ ಕೊಟ್ಟು ಜನರಿಗೆ ಯಾವ ರೀತಿಯ ಸಹಾಯವನ್ನು ಒದಗಿಸಬೇಕೆಂಬ ಮಾಹಿತಿಯನ್ನು ಕೂಡ ನೀಡಿದ್ದಾರೆ. ಜಿಲ್ಲಾಧಿಕಾರಿ ಅವರ ಉತ್ಸಾಹದ ಕೆಲಸವನ್ನು ಕಂಡಂತಹ ಉಡುಪಿ ಜಿಲ್ಲೆಯ ಪ್ರಮುಖ ನಾಯಕರುಗಳು, ಸಮಾಜ ಸೇವಕರುಗಳು, ಸಂಘ ಸಂಸ್ಥೆಗಳು ತಮ್ಮ ಕೆಲಸವನ್ನು ಆರಂಭಿಸಿವೆ.

ಎರಡು ದಿನಗಳ ಹಿಂದೆಯಷ್ಟೇ ದೇಶದ ಪ್ರಧಾನಿ ನರೇಂದ್ರ ಮೋದಿ ಮುಂದಿನ 21ದಿನಗಳು ದೇಶ ಲಾಕ್ ಡೌನ್ ಆಗಲಿದೆ ಎಂಬ ಸುದ್ದಿ ಬಿತ್ತರಿಸಿದ ತಕ್ಷಣ, ಉಡುಪಿ ಜಿಲ್ಲೆಯ ಹಲವರು ತಮ್ಮ ಹೃದಯ ವೈಶಾಲ್ಯ ತೋರಿಸಿದ್ದಾರೆ. ಮುಂದಿನ 19 ದಿನಗಳು ದೇಶದೊಂದಿಗೆ ಉಡುಪಿ ಜಿಲ್ಲೆಯ ಲಾಕ್ ಡೌನ್ ಆದರೆ, ಜಿಲ್ಲೆಯ ಬಡವರ ಸ್ಥಿತಿ ಯಾವ ಹಂತಕ್ಕೆ ತಲುಪಬಹುದು?? ದಿನಗೂಲಿ ನೌಕರರ ಮನೆಯ ಸ್ಥಿತಿ ಯಾವ ಸ್ವಂತಕ್ಕೆ ತಲುಪಬಹುದು?? ಎಂಬುದನ್ನು ಅರಿತ ಉಡುಪಿ ಜಿಲ್ಲೆಯ ವಿವಿಧ ಭಾಗದ ಪ್ರಮುಖ ಸಂಘಟನೆಗಳು, ಸಮಾಜ ಸೇವಕರು ತಮ್ಮದೇ ಆದ ಸಮಾಜ ಸೇವೆಯನ್ನು ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಬಡಜನತೆ ಇದ್ದಾರೆ. ಕೆಲವೊಂದು ಕಾಲೊನಿಗಳು ಕಂಡಾಗ ಜಿಲ್ಲೆಯಲ್ಲಿ ಬಡ ಜನರು ಯಾವ ರೀತಿ ತಮ್ಮ ಜೀವನವನ್ನು ಸಾಗಿಸುತ್ತಾರೆ ಎಂಬುದನ್ನು ನೋಡಬಹುದು. ಆದರೆ ಕಷ್ಟದ ಸಮಯದಲ್ಲಿ ಇಂತಹ ಬಡಜನರನ್ನು ಉಡುಪಿ ಜಿಲ್ಲೆಯ ಸಹೃದಯಿ ಮನಸ್ಸುಗಳು ಯಾವತ್ತೂ ಕೈ ಬಿಟ್ಟಿಲ್ಲ. ಜಾತಿ ಮತ ಭೇದವಿಲ್ಲದೆ ರಾಜಕೀಯ ವೈಮನಸ್ಸು ಎಲ್ಲವನ್ನೂ ಬಿಟ್ಟು ತಮ್ಮ ಹೃದಯ ವೈಶಾಲ್ಯವನ್ನು ತೋರ್ಪಡಿಸುತ್ತಾರೆ.

ದೇಶದ ಯಾವುದೇ ಭಾಗದಲ್ಲಿ ನೆರೆ, ಚಂಡಮಾರುತ, ಭೂಕಂಪ, ಮುಖ್ಯಮಂತ್ರಿ ಪರಿಹಾರ ನಿಧಿ.., ಏನೇ ಆಗಲಿ, ಉಡುಪಿ ಜಿಲ್ಲೆಯ ಬಹಳಷ್ಟು ಹೃದಯಗಳು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ನಾವೆಲ್ಲರೂ ಕಂಡಿದ್ದೇವೆ. ವಿವಿಧ ಸಂಘಟನೆಗಳು, ವಿವಿಧ ಧರ್ಮದ ಸಂಘಟನೆಗಳು, ರಾಜಕೀಯ ಪಕ್ಷದ ಸದಸ್ಯರು ಅಥವಾ ಕಾರ್ಯಕರ್ತರ ಮೂಲಕ ಕಷ್ಟದಲ್ಲಿರುವವರಿಗೆ ತಾವೇ ಸ್ವತಃ ಮುಂದೆ ನಿಂತು ಸಹಾಯಹಸ್ತವನ್ನು ಚಾಚುತ್ತಾರೆ. ಈಗ ಕೋರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ದೇಶದಲ್ಲಿರುವ ಪರಿಸ್ಥಿತಿಯನ್ನು ಕಂಡಂತಹ ಉಡುಪಿ ಜಿಲ್ಲೆಯ ಮಾನವ ಹೃದಯಗಳು ಹಸ್ತ ಚಾಚುವ ಮನಸ್ಸುಗಳು ಉಡುಪಿ ಜಿಲ್ಲೆಯ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದೆ ನಿಂತಿವೆ.

ಉಡುಪಿ ಜಿಲ್ಲೆ ಭಾಗಶಃ ಸಂಪೂರ್ಣ ಬಂದ್ ಆಗಿದೆ. ಈ ಹಂತದಲ್ಲಿ ಉಡುಪಿ ಜಿಲ್ಲೆಯಲ್ಲಿ ಸಹಾಯ ಹಸ್ತದ ಕೆಲಸಗಳು ಆರಂಭವಾಗಿದೆ. ಕೊಡೋಣ ವೈರಸ್ಸಿನ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಭಾಗದಲ್ಲಿ ಮಾಹಿತಿ ಶಿಬಿರಗಳು, ಮಾಸ್ಕ್ ವಿತರಣೆ ಕಾರ್ಯಕ್ರಮಗಳು ಕೂಡ ಜರುಗಿದೆ. ಉದ್ಯಾವರ ನವಚೇತನ ಯುವಕ ಮಂಡಲ ಅಧ್ಯಕ್ಷ ಸುಪ್ರೀತ್ ಸುವರ್ಣ ರವರ ನೇತೃತ್ವದಲ್ಲಿ ಗ್ರಾಪಂ ಸದಸ್ಯರು ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಮಾಸ್ಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಉದ್ಯಾವರ ಗುಡ್ಡೆಯಂಗಡಿ ರಿಕ್ಷಾ ಚಾಲಕ ಮಾಲಕರ ಸಂಘವೊಂದು ಮಾಹಿತಿ ಶಿಬಿರದೊಂದಿಗೆ ತಮ್ಮ ರಿಕ್ಷಾದಲ್ಲಿ ಚಾಲನೆ ಮಾಡುವವರಿಗೆ ಮತ್ತು ಗ್ರಾಮಸ್ಥರಿಗೆ ಮಾಸ್ಕ್ ವಿತರಣೆ ಮಾಡಿ ತಮ್ಮ ಹೃದಯ ವೈಶಾಲ್ಯತೆಯನ್ನು ತೋರ್ಪಡಿಸಿದ್ದಾರೆ. ಇಂತಹ ಕೆಲಸಗಳು ಉಡುಪಿ ಜಿಲ್ಲೆಯ ಬಹಳಷ್ಟು ಪರಿಸರದಲ್ಲಿ ವಿವಿಧ ಸಂಘಟನೆಗಳು ಮಾಡಿಕೊಂಡಿರುವುದು ನಿಜಕ್ಕೂ ಶಾಘ್ಲನೀಯ.

ಉಡುಪಿ ನಗರದ ಉದ್ಯಮಿ, ಬಿಜೆಪಿ ಮುಖಂಡ ರಾಘವೇಂದ್ರ ಕಿಣಿ ಬಡವರಿಗೆ ದಿನಪ್ರತಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿರುವುದು ನಿಜಕ್ಕೂ ಮೆಚ್ಚುವಂಥದ್ದು. ಇವರೊಂದಿಗೆ ಹಲವಾರು ಹೃದಯ ವೈಶಾಲ್ಯದ ಮನಸ್ಸುಗಳು ಕೈಜೋಡಿಸಿವೆ. ದಿನಪ್ರತಿ ಎಂಬಂತೆ ಹಲವಾರು ಸ್ಥಳಗಳಲ್ಲಿ ನೂರಾರು ಮುಗ್ಧ ಬಡ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಜಿಲ್ಲೆಯ ಖ್ಯಾತ ಸಮಾಜ ಸೇವಕ, ಆಪದ್ಬಾಂಧವ ವಿಶು ಶೆಟ್ಟಿ ಅಂಬಲಪಾಡಿ ಯಾವುದೇ ಪ್ರಚಾರವಿಲ್ಲದೆ ಸಮಾಜ ಸೇವಕಿ ಐರಿನ್ ಅಂದ್ರಾದೆ ಅವರ ಜೊತೆಗೂಡಿ ಹಸಿದ ಹೊಟ್ಟೆಗೆ ಊಟವನ್ನು ನೀಡುವಂತಹ ಕೆಲಸವನ್ನು ಆರಂಭಿಸಿದ್ದಾರೆ. ಇಂದಿನಿಂದ ಅನ್ಸಾರ್ ಅಹಮದ್, ಮಹಮ್ಮದ್ ಶ್ರೀ ಮಣಿಪಾಲ, ಉಡುಪಿ, ಸಂತೆಕಟ್ಟೆ, ಉದ್ಯಾವರ ಪರಿಸರದಲ್ಲಿರುವ ಬಡವರಿಗೆ ಊಟದ ವ್ಯವಸ್ಥೆಯನ್ನು ಹಮ್ಮಿಕೊಂಡಿದ್ದಾರೆ. ಕಾರ್ಕಳದಲ್ಲಿ ಕಾಂಗ್ರೆಸ್ ಮುಖಂಡ ಪುರಸಭಾ ಸದಸ್ಯ ಶುಭದ ರಾವ್ ಯಾವುದೇ ಸಹಾಯ ಮಾಡಲು ಸಿದ್ಧರಿರುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ದಿವಾಕರ ಬೊಳ್ಜೆ ಮೆಡಿಕಲ್, ದಿನಸಿ ವಸ್ತುಗಳು, ನೀರಿನ ವ್ಯವಸ್ಥೆ ಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂಬುದಾಗಿ ಘೋಷಿಸಿದ್ದಾರೆ. ಕಥೊಲಿಕ್ ಸಭಾ ಉದ್ಯಾವರ ಘಟಕವು ಬಡವರಿಗೆ ಆಹಾರ ಬೇಕಾದರೆ ತಮ್ಮನ್ನು ಸಂಪರ್ಕಿಸಲು ವಿನಂತಿಸಿದ್ದಾರೆ. ಜಿಲ್ಲೆಯ ಪ್ರಮುಖ ಸಂಸ್ಥೆ ಜೈ ಭಾರ್ಗವ ತಂಡವಂತೂ ಉಡುಪಿ ಜಿಲ್ಲೆಯವರು ದೇಶದ ಯಾವುದೇ ಮೂಲೆಯಲ್ಲಿದ್ದರೂ, ಅದರಲ್ಲೂ ಬೆಂಗಳೂರು, ಮುಂಬಯಿ ಅಂತ ಮಹಾನಗರದಲ್ಲಿದ್ದರೂ ಸಹಾಯ ಮಾಡುವುದಾಗಿ ಘೋಷಿಸುವುದು ನಿಜಕ್ಕೂ ಶಾಘ್ಲನೀಯ. ಕಟಪಾಡಿ, ಕೋಟೆ, ಮಟ್ಟು, ಕುರ್ಕಾಲು, ಉದ್ಯಾವರ, ಪಾಂಗಾಳ ಪರಿಸರದವರಿಗೆ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಊಟದ ವ್ಯವಸ್ಥೆ ಮಾಡಿರುತ್ತಾರೆ.

ಉಡುಪಿ ನಗರದಲ್ಲಿ ರಾಘವೇಂದ್ರ ಕಿಣಿಯವರ ಸ್ನೇಹಿತರಾದ ದಿನೇಶ್ ಹಾಗೂ ಹುಸೇನ್ ದಿನಸಿ ಸಾಮಗ್ರಿ, ಔಷಧಗಳನ್ನು ಮನೆ ಬಾಗಿಲ ತನಕ ತಲುಪಿಸುವ ಕೆಲಸವನ್ನು ಆರಂಭಿಸಿದ್ದಾರೆ. ಸಮಾಜ ಸೇವಕ ಅಮೃತ್ ಶೆಣೈ ತಮ್ಮ ತಂಡದೊಂದಿಗೆ, ರಾಘವೇಂದ್ರ ಕಿಣಿ ಮತ್ತು ತಂಡದೊಂದಿಗೆ ಸೇರಿ ಕೆಲಸವನ್ನು ವಹಿಸಿಕೊಂಡು ಬರುತ್ತಿದ್ದಾರೆ. ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷರಾದ ನಾಗೇಶ ನಾವಡ ಹಾಗು ಜೆಸಿಐ ಕುಂದಾಪುರ ಸಿಟಿಯ ಸರ್ವ ಸದಸ್ಯರು ನಗರದಲ್ಲಿ ಅಗತ್ಯ ಇರುವವರಿಗೆ ಊಟದ ವ್ಯವಸ್ಥೆಯನ್ನು ನೀಡುತ್ತಿದೆ.
ಬೆಳ್ಮಣ್ಣು ಪರಿಸರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಅನಿತಾ ಡಿಸೋಜಾ ನೇತೃತ್ವದ ತಂಡ, ಯೋಗೀಶ್ ಇನ್ನ ಮತ್ತು ನೇತೃತ್ವದ ತಂಡ ಜೊತೆಗೆ ಹಲವಾರು ಸಹೃದಯಿ ಮನಸ್ಸುಗಳು ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಮಾಡುವ ಕೆಲಸವನ್ನು ಆರಂಭಿಸಿವೆ. ಕುಂದಾಪುರದ ನಿವಾಸಿ ಪ್ರಸ್ತುತ ದುಬೈ ಯಲ್ಲಿ ವಾಸಿಸುತ್ತಿರುವ ಸುಜಿತ್ ಎನ್ನುವರು ಅಲ್ಲಿಂದಲೇ ತನ್ನ ಜಿಲ್ಲೆಯವರಿಗೆ ಅಗತ್ಯ ಬಿದ್ದಲ್ಲಿ ತಮ್ಮನ ಸಂಪರ್ಕಿಸಿ ಎಂಬುದಾಗಿ ಉಡುಪಿ ಟೈಮ್ಸ್ ಗೆ ತಿಳಿಸಿದ್ದಾರೆ. ಎಲ್ಲದಕ್ಕಿಂತಲೂ ಸುಭಾಷ್ ಎಂಬುವರೊಬ್ಬರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೋರೊನ ಮಹಾಮಾರಿಯ ಸಂಕಟ ಕಳೆಯುವ ತನಕ ನಿರ್ಗತಿಕ ಕುಟುಂಬಗಳನ್ನು ದತ್ತು ತೆಗೆದುಕೊಳ್ಳುವುದಾಗಿ ನಿರ್ಧರಿಸಿದ್ದಾರೆ.

ಏನೇ ಇರಲಿ, ಉಡುಪಿ ಜಿಲ್ಲೆ ಪ್ರತಿಭಾವಂತರ ನಾಡು. ರಾಜಕೀಯದಲ್ಲಿ ಆಸ್ಕರ್ ಫೆರ್ನಾಡಿಸ್, ಡಾ. ವಿ.ಎಸ್. ಆಚಾರ್ಯ, ವೀರಪ್ಪ ಮೊಯ್ಲಿ ಅವರಂಥ ಧೀಮಂತ ನಾಯಕರನ್ನು ಕಂಡ ಊರು. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹಲವಾರು ಬಾರಿ ಪ್ರಥಮ ಸ್ಥಾನವನ್ನು ಪಡೆದಂತಹ ಜಿಲ್ಲೆ. ಮಣಿಪಾಲದ ಕೆಎಂಸಿ ಆಸ್ಪತ್ರೆ ಜಿಲ್ಲೆಯಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ವಿಶ್ವವಿಖ್ಯಾತ ಶ್ರೀಕೃಷ್ಣ ಮಠ ಮತ್ತು ಅಷ್ಟ ಮಠಗಳು, ಅತ್ತೂರಿನ ಸಂತ ಲಾರೆನ್ಸರ ಬಸಿಲಿಕಾ ಉಡುಪಿ ಜಿಲ್ಲೆಯಲ್ಲಿ ಇರುವುದರಿಂದ ವಿಶ್ವದಲ್ಲಿ ಉಡುಪಿಗೆ ವಿಶೇಷವಾದ ಸ್ಥಾನಮಾನವಿದೆ. ಸದಾ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿರುವ ಮಲ್ಪೆ ಬೀಚ್ ಸಹಿತವಾಗಿ ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಪ್ರವಾಸಿ ಕೇಂದ್ರಗಳಿವೆ. ಸದಾ ಪ್ರವಾಸಿಗರನ್ನು ಸೆಳೆಯುತ್ತಿರುವ ಉಡುಪಿ ಜಿಲ್ಲೆ ಸಹಾಯ ಹಸ್ತದಲ್ಲಿ ಮುಂದೆ ಇರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಕೋರೊನ ಎಂಬ ಮಹಾಮಾರಿ ದೇಶದೊಂದಿಗೆ ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ ಬಳಿಕವಂತೂ ಉಡುಪಿ ಜಿಲ್ಲೆಯ ಹೃದಯ ವೈಶಾಲ್ಯ ಬಡವರಿಗೆ ಮಿಡಿಯುತ್ತಿದೆ. ಇದು ಕೇವಲ ನಮ್ಮ ಗಮನಕ್ಕೆ ಬಂದ ವರದಿಗಳು ಇನ್ನು ಅನೇಕ ಜನ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಈ ರೀತಿಯ ಮಿಡಿಯುವ ಎಲ್ಲ ಮಾನವ ಹೃದಯಗಳಿಗೆ ‘ಉಡುಪಿ ಟೈಮ್ಸ್‘ ಕಡೆಯಿಂದ ದೊಡ್ಡ ಸಲಾಂ.

2 thoughts on “ಲಾಕ್ ಡೌನ್: ಅಸಹಾಯಕರಿಗೆ ಮಿಡಿಯುತ್ತಿರುವ ಉಡುಪಿಯ ಸಹೃದಯಿಗಳು

Leave a Reply

Your email address will not be published. Required fields are marked *

error: Content is protected !!