‘ಮೇಕ್ ಇನ್ ಇಂಡಿಯಾ’ದಿಂದ ‘ರೇಪ್ ಇನ್ ಇಂಡಿಯಾ’ದತ್ತ : ರಂಜನ್ ಚೌಧರಿ
ನವದೆಹಲಿ: ‘ಮೇಕ್ ಇನ್ ಇಂಡಿಯಾ’ದಿಂದ ‘ರೇಪ್ ಇನ್ ಇಂಡಿಯಾ’ದತ್ತ ಭಾರತ ಸಾಗುತ್ತಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಲೋಕಸಭೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಅಧಿರ್ ರಂಜನ್ ಚೌಧರಿ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳ ಕುರಿತು ಪ್ರಧಾನಮಂತ್ರಿ ಮಾತನಾಡಬೇಕೆಂದು ಆಗ್ರಹಿಸಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಪ್ರಧಾನಿ ಮೋದಿಯವರು ಮೌನ ನಿಜಕ್ಕೂ ದುರಾದೃಷ್ಟಕರ ಸಂಗತಿ. ಮೇಕ್ ಇನ್ ಇಂಡಿಯಾ ದಿಂದ ಭಾರತ ನಿಧಾನಗತಿಯಲ್ಲಿ ರೇಪ್ ಇನ್ ಇಂಡಿಯಾದತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶದ ಉನ್ನಾವೋ ಹಾಗೂ ಹೈದರಾಬಾದ್ ಪ್ರಿಯಾಂಕಾ ರೆಡ್ಡಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಕುರಿತು ಚೌಧರಿಯವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್ ನಲ್ಲಿ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದರು, ಅತ್ಯಾಚಾರ ನಡೆಸಿದ ಆಕೆಯನ್ನು ಸಜೀವ ದಹನ ಮಾಡಿದ್ದರು. ಇದೇ ರೀತಿಯ ಘಟನೆ ಉತ್ತರಪ್ರದೇಶದಲ್ಲಿಯೂ ನಡೆದಿತ್ತು. ಯುವತಿ ಮೇಲೆ ಅತ್ಯಾಚಾರ ನಡೆಸಿದ್ದ ಕಾಮುಕರು ನಂತರ ಆಕೆ ನ್ಯಾಯಾಲಯಕ್ಕೆ ವಿಚಾರಣೆಗೆ ಹೋಗುತ್ತಿದ್ದ ವೇಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಜೀವನ್ಮರಣ ಹೋರಾಟದ ಬಳಿಕ ಕೆಲ ದಿನಗಳ ಹಿಂದಷ್ಟೇ ಯುವತಿ ಕೊನೆಯುಸಿರೆಳೆದಿದ್ದಳು.