ಸಮಾಜ ಸೇವೆ ಸೌಲಭ್ಯ ಅರ್ಹರಿಗೆ ದೊರಕಲಿ ಸಾಫಲ್ಯ ಟ್ರಸ್ಟ್ ಉದ್ಘಾಟಿಸಿ ಲೇಖಕಿ ಡಾ.ನಿಕೇತನ ಆಶಯ
ಉಡುಪಿ: ಸಮಾಜ ಸೇವೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ನೀಡುವ ಕಾರ್ಯ ವ್ಯವಸ್ಥಿತವಾಗಿ ನಡೆದಾಗ ನಮ್ಮ ಸೇವೆ ಅರ್ಥಪೂರ್ಣವಾಗಿರುತ್ತದೆ ಎಂದು ಲೇಖಕಿ, ಹಿರಿಯಡಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಅಭಿಪ್ರಾಯ ಪಟ್ಟರು. ಭಾನುವಾರ ಅಜ್ಜರಕಾಡು ಮಹಿಳಾ ಸಮಾಜದ ಸಭಾಂಗಣದಲ್ಲಿ ಸಾಫಲ್ಯ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಲ್ಲಿ ಸೇವಾ ಮನೋಭಾವ ಮತ್ತು ಸಮಾಜಿಕ ಚಿಂತನೆಗಳು ಹೆಚ್ಚು ಮೂಡಿದಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ವಾವಲಂಭಿಗಳಾಗುವ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಫಲ್ಯ ಟ್ರಸ್ಟ್‌ನ ಸೇವಾಕಾರ್ಯ ಉದ್ದೇಶ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಸಾಮಾಜದ ಆಶಕಿರಣವಾಗಿ ಸಾಫಲ್ಯ ಟ್ರಸ್ಟ್ ಮೂಡಿ ಬರಲಿ ಎಂದು ಟ್ರಸ್ಟ್‌ನ ಪ್ರವರ್ತಕರಿಗೆ, ಸದಸ್ಯರಿಗೆ ಶುಭಹಾರೈಸಿದರು.
ಸ್ವಾಗತಿಸಿ, ಪ್ರಾಸ್ಥಾವಿಕ ಮಾತನಾಡಿದ ಸಾಫಲ್ಯ ಟ್ರಸ್ಟ್‌ನ ಅಧ್ಯಕ್ಷೆ ನಿರುಪಮ ಪ್ರಸಾದ್ ಶೆಟ್ಟಿ, ಉಡುಪಿ, ಮಂಗಳೂರು ಉತ್ಸಾಹಭರಿತ ಮಹಿಳೆಯರೆಲಲ್ಲ ಸೇರಿ ಸಾಮಾಜಿಕ ಸೇವೆ ನೀಡುವ ಉದ್ದೇಶದಿಂದ ಟ್ರಸ್ಟ್‌ನ್ನು ಸ್ಥಾಪಿಸಿದ್ದೇವೆ. ಆರ್ಥಿಕ ಚೌಕಟ್ಟಿನೊಳಗೆ ನಿಗಧಿತ ಸಮಯದಲ್ಲಿ ಅಗತ್ಯಉಳ್ಳವರಿಗೆ ನೆರವು ಸಹಾಯ, ಮಕ್ಕಳಿಗೆ ಶಿಕ್ಷಣ ಸಹಾಯದ ಜತೆಗೆ ಶಿಸ್ತು, ನಿಯಮಪಾಲನೆ, ಜವಬ್ಧಾರಿ ತಿಳಿವಳಿಕೆ, ಗ್ರಾಮೀಣ ಶಾಲಾ ಮಕ್ಕಳಿಗೆ ವೃತ್ತಿಪರ ಕೋರ್ಸ್ ಮಾಹಿತಿ, ಪರಿಸರ ಸಂರಕ್ಷಣೆ, ಗ್ರಾಮೀಣ ಮಹಿಳೆಯರ ಸಶಕ್ತಿಕರಣ, ಸಂಸ್ಕೃತಿ ನಾಡಿನ ಬಗ್ಗೆ ಅರಿವು ಮೂಡಿಸುವುದು ಟ್ರಸ್ಟ್‌ನ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮಹಿಳಾ ಸಮಾಜದ ಅಧ್ಯಕ್ಷೆ ಜಯಂತಿ ಎಸ್.ಶೆಟ್ಟಿ ಟ್ರಸ್ಟ್ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಅತಿಥಿಗಳಾಗಿ ಅಮೃತ ಪುರೊಷತ್ತಮ್ ಶೆಟ್ಟಿ ಮತ್ತು ಟ್ರಸ್ಟ್‌ನ ಕಾರ್ಯದರ್ಶಿ ಇಂದು ರಮಾನಂದ್ ಭಟ್, ಖಜಾಂಚಿ ಮಮತ ದಿವಾಕರ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಶೈಕ್ಷಣಿಕ ಪರಿಕರ, ಶಾಲಾ-ಕಾಲೇಜುಗಳಿಗೆ ಪೀಠೋಪಕರಣ ವಿತರಿಸಲಾಯಿತು.