ಬಂದ್: ಶಾಂತಿಗೆ ಭಂಗ ಉಂಟಾದರೆ ಆಯೋಜಕರೇ ಹೊಣೆ: ಆಯುಕ್ತ
ಬೆಂಗಳೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಬುಧವಾರ ಪ್ರತಿಭಟನಕಾರರು ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರೆ, ಸಾರ್ವಜನಿಕ ಶಾಂತಿಗೆ ಭಂಗ ಆಗುವಂತಹ ಚಟುವಟಿಕೆಗಳಲ್ಲಿ ತೊಡಗಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.
ಮಂಗಳವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪ್ರತಿಭಟನೆ ನಡೆದಿವೆ. ನಾಳೆಯ ಬಂದ್ಗೆ ಕೆಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, 15 ಲಕ್ಷ ಬಾಂಡ್ ಬರಿಸಿಕೊಂಡು 46 ಸಂಘಟನೆಗಳಿಗೆ ಅನುಮತಿ ನೀಡಲಾಗಿದೆ ಎಂದರು.
ನಗರದಲ್ಲಿ ಯಾವುದೇ ಸ್ಥಳದಲ್ಲಿ ಕಲ್ಲು ತೂರಾಟ ನಡೆದರೆ ಆಯೋಜಕರೆ ಹೊಣೆಯಾಗಿದ್ದು, ಇದು ಸಾರ್ವಜನಿಕರ ಭದ್ರತೆ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟಿನ ಆದೇಶ ನಾವು ಪಾಲನೆ ಮಾಡುತ್ತೇವೆ ಎಂದು ಆಯುಕ್ತರು ತಿಳಿಸಿದರು.
ಪ್ರತಿಭಟನೆ ಸ್ಥಳ ಮತ್ತು ಜಾಥಾದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದರೆ ದೂರು ದಾಖಲಿಸಿಕೊಳ್ಳಲಾಗುವುದು. ಪ್ರತಿಭಟನಕಾರರು ಫ್ರೀಡಂ ಪಾರ್ಕ್ ಬಳಿ ಸೇರಿ ಸಂಬಂಧಪಟ್ಟವರ ಬಳಿ ಮನವಿ ಮಾಡಿಕೊಳ್ಳಬಹುದು. ಆದರೆ, ಅಂಗಡಿ ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಬಾರದು. ನಾವು ಸಂವಿಧಾನ ಹಕ್ಕಿಗೆ ಎಲ್ಲಿಯೂ ಭಂಗ ತರುವುದಿಲ್ಲ ಎಂದು ಅವರು ತಿಳಿಸಿದರು.
ನಾಳೆ ಪ್ರತಿಭಟನೆಯ ಭದ್ರತೆಗೆ ರೈಲ್ವೆಸ್ ವಿಶೇಷವಾಗಿ ಹಾಗೂ ಕೆಎಸ್ಆರ್ಪಿ, ಸಿಎಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಫ್ರೀಡಂ ಪಾರ್ಕ್ ನಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ ಎಂದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಆಯಾ ವ್ಯಾಪ್ತಿಯಲ್ಲಿ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ರಾತ್ರಿಯಿಂದಲೇ ಪೊಲೀಸರು ಆಯಾ ಠಾಣೆ ವ್ಯಾಪ್ತಿಯ ಗಸ್ತಿನಲ್ಲಿ ಇರಲಿದ್ದಾರೆ ಎಂದರು.
ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡಿದರೆ, ಸಂಘಟನೆಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರಿಂದಲೇ ನಷ್ಟವನ್ನು ತುಂಬಿಸಲಾಗುವುದು ಎಂದು ತಿಳಿಸಿದರು.
ನಾಳೆ ಭಾರತ್ ಬಂದ್ಗೆ ಬಾಹ್ಯ ಬೆಂಬಲ ನೀಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಬ್ಯಾಂಕ್ ವೃತ್ತದ ಬಳಿ ನಾಳೆ ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುವುದಾಗಿಯೂ ಅವರು ತಿಳಿಸಿದ್ದಾರೆ.