ಐಎಂಎ ವಂಚನೆ: ಕಂಪನಿ ಮಾಲೀಕ ಮನ್ಸೂರ್ ಖಾನ್ ಎಸ್‌ಐಟಿ ವಶಕ್ಕೆ
ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ಪರಾರಿಯಾಗಿದ್ದ ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ ಕೊನೆಗೂ ವಿಶೇಷ ತನಿಖಾ ತಂಡ (ಎಸ್ಐಟಿ) ಹಾಗೂ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.
ದುಬೈನಿಂದ ವಿಮಾನದಲ್ಲಿ (AI 916) ದೆಹಲಿಯ ನಿಲ್ದಾಣಕ್ಕೆ ಶುಕ್ರವಾರ ನಸುಕಿನಲ್ಲಿ ಬಂದಿಳಿದ ಮನ್ಸೂರ್ ಖಾನ್‌ನನ್ನು ಎಸ್ಐಟಿ ಹಾಗೂ ಇಡಿ ಅಧಿಕಾರಿಗಳು ಜಂಟಿಯಾಗಿ ವಶಕ್ಕೆ ಪಡೆದು ಬಂಧಿಸಿದ್ದಾರೆ.
ಐಎಂಐ ಸಮೂಹ ಕಂಪನಿಯ ಕಚೇರಿಯನ್ನು ಬಂದ್ ಮಾಡಿ ದುಬೈಗೆ ಹೋಗಿ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್, ಅಲ್ಲಿಂದಲೇ ವಿಡಿಯೊಗಳನ್ನು ಬಿಡುಗಡೆ ಮಾಡಿದ್ದ. ಅವರ ಪತ್ತೆಗಾಗಿ ತನಿಖೆ ಕೈಗೊಂಡಿದ್ದ ಎಸ್ಐಟಿ ಹಾಗೂ ಇ.ಡಿ. ಅಧಿಕಾರಿಗಳು, ಬ್ಲೂ ಕಾರ್ನರ್ ನೋಟಿಸ್ ಸಹ ಜಾರಿ ಮಾಡಿದ್ದರು.
ದುಬೈನಲ್ಲಿದ್ದ ಮನ್ಸೂರ್ ಖಾನ್ ಬಗ್ಗೆ ಅಲ್ಲಿಯ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದವು. ಮನ್ಸೂರ್ ಖಾನ್ ವಿಮಾನದಲ್ಲಿ ದುಬೈನಿಂದ ಹೊರಟ ಬಗ್ಗೆ ಅಧಿಕಾರಿಗಳಿಗೆ ಖಚಿತ ಸುಳಿವು ಸಿಕ್ಕಿತ್ತು. ದೆಹಲಿಯಲ್ಲಿ ಕಾದುಕುಳಿತಿದ್ದ ಅಧಿಕಾರಿಗಳು, ಆತ ವಿಮಾನ ಇಳಿಯುತ್ತಿದ್ದಂತೆ ವಶಕ್ಕೆ ಪಡೆದಿದರು. ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬೆಂಗಳೂರಿಗೆ ಕರೆತರಲಿದ್ದಾರೆ.
‘ಐಎಂಎ ಸಮೂಹ ಕಂಪನಿ ವಿರುದ್ಧ ಕಮರ್ಷಿಯಲ್ ಸ್ಟೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಮೊದಲ ಆರೋಪಿ ಮನ್ಸೂರ್ ಖಾನ್‌ನನ್ನು ನನದೆಹಲಿಯ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇ.ಡಿ ಅಧಿಕಾರಿಗಳು ಮೊದಲು ಆರೋಪಿಯನ್ನು ವಿಚಾರಣೆ ನಡೆಸಲಿದ್ದಾರೆ. ನಂತರ, ನಾವು ಆದಷ್ಟು ಬೇಗ ಬೆಂಗಳೂರು ಕರೆತಂದು ನ್ಯಾಯಾಲಯದ ಎದುರು ಹಾಜರುಪಡಿಸುತ್ತೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಎಸ್‌ಐಟಿ ಸಿಬ್ಬಂದಿಯೊಬ್ಬರು ತಿಳಿಸಿದರು.