ಕಾನೂನು ಬಾಹಿರ ಸಲಹೆಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ: ನ್ಯಾಯಾಧೀಶ

ಉಡುಪಿ: ಪೋಕ್ಸೋ ನ್ಯಾಯಾಲಯ ಒಂದು ಲೆಕ್ಕದಲ್ಲಿ ಸಮಾಜಕ್ಕೆ ಒಳ್ಳೆಯದಾಗಿದ್ದರೆ, ಇನ್ನೊಂದು ಲೆಕ್ಕದಲ್ಲಿ ಅದು ಒಳ್ಳೆಯ ಸಂಕೇತವಲ್ಲ. ಆದರೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಹಾಗೂ ಈ ಪಿಡುಗುವಿನ ನಿರ್ಮೂಲನೆಗೆ ಪೋಕ್ಸೋ ನ್ಯಾಯಾಲಯ ಅವಶ್ಯಕ ಎಂದು ಸುಪ್ರೀಂಕೋರ್ಟ್‌ ನ್ಯಾಯಾಧೀಶ ಎಸ್‌. ಅಬ್ದುಲ್‌ ನಜೀರ್‌ ಹೇಳಿದರು.

ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಒಂದನೇ ಮಹಡಿಯಲ್ಲಿ ಶನಿವಾರ ನೂತನ ಪೋಕ್ಸೋ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಪೋಕ್ಸೋ ಪ್ರಕರಣ ಹೆಚ್ಚಿದರೆ ಅದು ಸಮಾಜಕ್ಕೆ ಒಳ್ಳೆಯ ಸಂದೇಶವಲ್ಲ. ಪೋಕ್ಸೋ ಕೋರ್ಟ್‌ ಅಥವಾ ಇನ್ನಿತರ ನ್ಯಾಯಾಲಯಗಳು ಜನರ ಅನುಕೂಲಕ್ಕಾಗಿ ಇರುವುದೇ ಹೊರತು, ಜನರು ನ್ಯಾಯಾಲಯಕ್ಕಾಗಿ ಇರುವುದಲ್ಲ. ಆದ್ದರಿಂದ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಹೆಚ್ಚು ಮಾಡಲು ಅವಕಾಶ ಕೊಡಬಾರದು. ಹೆಚ್ಚೆಚ್ಚು ಪ್ರಕರಣ ದಾಖಲಾದರೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಿವಿಲ್‌ ಹಾಗೂ ಕ್ರಿಮಿನಲ್‌ ಪ್ರಕರಣಗಳ ಅನುಪಾತ ಕರ್ನಾಟಕದಲ್ಲಿ ಶೇ. 50ರಷ್ಟಿದ್ದರೆ,
ಉತ್ತರ ಭಾರತದಲ್ಲಿ ಶೇ. 30 ಹಾಗೂ ಶೇ. 70ರಷ್ಟಿದೆ. ಉತ್ತಮ ಜೀವನ ನಡೆಸಲು ಸಮಾಜದ
ಸ್ವಾಸ್ಥ್ಯ ಬಹಳ ಮುಖ್ಯವಾಗಿದ್ದು, ಎಲ್ಲರೂ ಉತ್ತಮ ಕಾನೂನು ಸಲಹೆ ನೀಡಬೇಕು. ಕಾನೂನು ಬಾಹಿರ ಸಲಹೆಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ ಎಂದರು.


ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಸಿ.ಎಂ. ಜೋಶಿ ಮಾತನಾಡಿ, ಜನರು
ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥ ಆಗಬೇಕೆಂದು ಬಯಸುತ್ತಿದ್ದಾರೆ. ಹಾಗಾಗಿ ನ್ಯಾಯಾಲಯಗಳು ಪ್ರಕರಣಗಳ ಇತ್ಯರ್ಥಕ್ಕೆ ಟಿ ಟ್ವೆಂಟಿ ಮಾದರಿಯನ್ನು ಅನುಸರಿಸಬೇಕು. ಇದರಿಂದ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯ ಎಂದರು. ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಸಮಾಜ ಇಂದು ಎಲ್ಲರನ್ನೂ ಅನುಮಾನದಿಂದ ನೋಡುವ ಪರಿಸ್ಥಿತಿ ಉದ್ಭವಿಸಿದೆ. ಸಂವಿಧಾನಕ್ಕೆ ಹಲವು ತಿದ್ದುಪಡಿ ತಂದರೂ ಜನರ ಆಶಯಕ್ಕೆ ತಕ್ಕಂತೆ ಕೆಲಸ ಆಗುತ್ತಿಲ್ಲ. ಇದಕ್ಕೆ ನ್ಯಾಯಾಲಯ ಅವಕಾಶ ಮಾಡಿಕೊಡದೆ, ಜನರ ನಂಬಿಕೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಹೈಕೋರ್ಟ್‌ ನ್ಯಾಯಾಧೀಶ ಅಶೋಕ್‌ ಜಿ. ನಿಜಗಣ್ಣನವರ್‌, ಪೋಕ್ಸೋ ಕೋರ್ಟ್‌ ನ್ಯಾಯಾಧೀಶೆ ವನಮಾಲಾ ಆನಂದರಾವ್‌ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ. ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೊನಾಲ್ಡ್‌ ಪ್ರವೀಣ್‌ ಕುಮಾರ್‌ ವಂದಿಸಿದರು. ವಕೀಲೆ ಎ.ಆರ್‌. ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.\

ಕೈ ಕುಳುಕುವ ಬದಲು ನಮಸ್ಕರಿಸಿ ಕೊರೊನಾ ಭೀತಿಯಿಂದಾಗಿ ದೆಹಲಿಯಲ್ಲಿ ಒಬ್ಬರಿಗೊಬ್ಬರು ಕೈ ಕುಳುಕುವುದನ್ನೇ ಮರೆತುಬಿಟ್ಟಿದ್ದು, ಭಾರತೀಯ ಸಂಪ್ರದಾಯದಂತೆ ನಮಸ್ಕಾರ ಮಾಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಸದ್ಯ ನಾವು ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಕಷ್ಟದಲ್ಲಿದ್ದೇವೆ. ಜಿಲ್ಲಾಡಳಿತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಹಳಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಅದಕ್ಕೆ ಎಲ್ಲರೂ ಸಹಕಾರ ನೀಡುವ ಮೂಲಕ ಕೊರೊನಾ ಪೀಡುಗನ್ನು ದೇಶದಿಂದಲೇ ನಿರ್ಮೂಲನೆ ಮಾಡೋಣ ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಎಸ್‌. ಅಬ್ದುಲ್‌ ನಜೀರ್‌ ಕರೆನೀಡಿದರು.

Leave a Reply

Your email address will not be published. Required fields are marked *

error: Content is protected !!