ಅಕ್ರಮ ಸಂಬಂಧ: ಒಂದು ಕೊಲೆ, ಎರಡು ಆತ್ಮಹತ್ಯೆ, ಮೂವರು ತಬ್ಬಲಿ

ಚಿಕ್ಕಮಗಳೂರು: ಇಲ್ಲಿನ ಕಡೂರು ತಾಲ್ಲೂಕಿನಲ್ಲಿ ಫೆ.17ರಂದು ಉಡುಪಿ ಲಕ್ಷ್ಮೀನಗರದ ಕವಿತ ಎಂಬಾಕೆಯ ಬರ್ಬರ ಕೊಲೆ ಪ್ರಕರಣಕ್ಕೆ ಆಘಾತಕಾರಿ ತಿರುವು ಸಿಕ್ಕಿದೆ. ವೈದ್ಯನ ತಪ್ಪಿಗೆ ಮೂರು ಜೀವಗಳು ಬಲಿಯಾಗಿ, ಮೂರು ಪುಟ್ಟ ಕಂದಮ್ಮಗಳು ತಬ್ಬಲಿಯಾಗಿದೆ.


ಕಳೆದ 17ರಂದು ಕವಿತಾಳ ಕೊಲೆ ನಡೆದ ನಂತರ ಆಕೆಯ ಪತಿ ದಂತ ವೈದ್ಯ ಡಾ. ರೇವಂತ್ ಪೊಲೀಸರಿಗೆ ದೂರು ನೀಡಿ ದರೋಡೆಕೋರರು ನನ್ನ ಪತ್ನಿಯನ್ನು ಕೊಂದು ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ನಾಟಕವಾಡಿದ್ದ. ಪೊಲೀಸರು ರೇವಂತ್ ಮನೆಗೆ ಬಂದು ತನಿಖೆ ನಡೆಸಿದಾಗ ಡಾ ರೇವಂತ್ ಮೇಲೆಯೇ ಅವರಿಗೆ ಸಂಶಯಬಂತು. ಕೊನೆಗೆ ಅದು ದೃಢವಾಗಿ ಪೊಲೀಸರಿಗೆ ಸತ್ಯ ಗೊತ್ತಾಗುತ್ತಿದ್ದಂತೆ ಭೀತಿಯಿಂದ ನಿನ್ನೆ ರೇವಂತ್ ಮನೆ ಹತ್ತಿರ ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ಪ್ರಾಣ ಕಳೆದುಕೊಂಡಿದ್ದಾನೆ.


ಪತ್ನಿಯ ಕೊಲೆ, ಪತಿಯ ಆತ್ಮಹತ್ಯೆಯ ಜಾಡು ಹಿಡಿದು ಹೊರಟಾಗ ಪೊಲೀಸರಿಗೆ ಸಿಕ್ಕಿದ್ದು ಡಾ.ರೇವಂತ್ ಗೆ ಇದ್ದ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ. ಹಿಂದೆ ಕಡೂರಿನಲ್ಲಿಯೇ ನೆಲೆಸಿದ್ದ ನಂತರ ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಹೋಗಿ ಅಲ್ಲಿ ನೆಲೆಸಿದ್ದ ಹರ್ಷಿತಾ ಜೊತೆಗೆ ಡಾ ರೇವಂತ್ ಗೆ ಅಕ್ರಮ ಸಂಬಂಧವಿತ್ತು. ಹರ್ಷಿತಾಗೆ ಮದುವೆಯಾಗಿದ್ದು ಪತಿ ಬಿಎಂಟಿಸಿ ಚಾಲಕ ಮತ್ತು ಅವರಿಗೆ ಒಬ್ಬ ಮಗಳಿದ್ದಾಳೆ. ಪತಿಯ ಅಕ್ರಮ ಸಂಬಂಧ ಬಗ್ಗೆ ಕವಿತಾ ಆಗಾಗ ಆಕ್ಷೇಪವೆತ್ತುತ್ತರಿಂದ ಪತಿ-ಪತ್ನಿ ಮಧ್ಯೆ ಜಗಳ ನಡೆಯುತ್ತಿತ್ತು. ತನ್ನ ನಡೆಗೆ ಪತ್ನಿಯಿಂದ ತೀವ್ರ ಆಕ್ಷೇಪವುಂಟಾದಾಗ ಆಕೆಯನ್ನು 5 ತಿಂಗಳ ಮಗುವಿನ ಮುಂದೆಯೇ ಕ್ರೂರವಾಗಿ ಹತ್ಯೆ ಮಾಡಿದ್ದ. 

ಡಾ ರೇವಂತ್ ದಂಪತಿಗೆ 5 ವರ್ಷದ ಹಾಗೂ 5 ತಿಂಗಳ ಗಂಡು ಮಕ್ಕಳಿದ್ದಾರೆ. ಇತ್ತ ರೇವಂತ್ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮಹಿಳೆ ಹರ್ಷಿತಾ ಕೂಡ ತನ್ನ ಮನೆಯಲ್ಲಿ ಕಳೆದ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ತುಮಕೂರಿನ ಆಕೆಯ ಪೋಷಕರಿಗೆ ಮೃತದೇಹ ಹಸ್ತಾಂತರ ಮಾಡಿದರು.

ಆತ್ಮಹತ್ಯೆಗೆ ಮುಂಚೆ ಹರ್ಷಿತಾ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಪತಿ ಸುದೀಂಧ್ರ ಮದ್ಯ ಸೇವಿಸಿ ಬಂದು ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು, ತನಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ನಮೂದಿಸಿದ್ದಾಳೆ. ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!