ನನ್ನ ಮೇಲಿನ ಎಲ್ಲಾ ಕೇಸು ರೀ ಓಪನ್ ಮಾಡಿಸಿ: ಬಿ. ಎಸ್. ವೈ ಸವಾಲು
ಉಡುಪಿ: ತಾಕತ್ತು ಇದ್ದರೆ ನನ್ನ ಮೇಲಿನ ಎಲ್ಲಾ ಕೇಸು ರೀ ಓಪನ್ ಮಾಡಿಸಿ, ಮೇ 23ರ ಮೊದಲು ಕೇಸು ಓಪನ್ ಮಾಡಿಸಿ. ಏಕೆಂದರೆ ಮೇ 23 ನಂತರ ನೀವು ಮನೆಗೆ ಹೋಗುತ್ತೀರಿ, ಆಮೇಲೆ ಕೇಸು ನಾವು ಓಪನ್ ಮಾಡಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಸಿ.ಎಂ ಎಚ್ಡಿ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.
ಬೈಂದೂರಿನ ವಂಡ್ಸೆಯಲ್ಲಿ ಚುನಾವಣಾ ಪ್ರಚಾರ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿ ಬಿಎಸ್ವೈ, ಮತದಾನದ ಬಳಿಕ ಯಡಿಯೂರಪ್ಪ ವಿರುದ್ಧ ಕೇಸ್ ರೀ ಒಪನ್ ಮಾಡಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಆದರೆ ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ, ತಾಕತ್ತು ಸಿಎಂಗೆ ಇಲ್ಲ. ಎಲ್ಲವನ್ನೂ ಎದುರಿಸಿದ್ದೇನೆ, ಮುಂದೆಯೂ ಎದುರಿಸುತ್ತೇನೆ ಎಂದರು.
ಇದೇ ವೇಳೆ ಮಂಡ್ಯದಲ್ಲಿ ಸಚಿವ ಪುಟ್ಟರಾಜು ಬಳಿ ಹಣಕ್ಕಾಗಿ ಬೇಡಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಮಾದೇಗೌಡರ ಬಗ್ಗೆ ನನಗೆ ಗೌರವ ಇದೆ. ಆದರೆ ಮಂಡ್ಯದಲ್ಲಿ ದುಡ್ಡಿನ ಮೇಲೆ ಚುನಾವಣೆ ನಡೆಯುತ್ತಿದೆ. ಮಂಡ್ಯ- ಮೈಸೂರು ತುಮಕೂರಲ್ಲಿ ಹಣದ ಹೊಳೆ ಹರಿಯುತ್ತಿದೆ. ಕುಮಾರಸ್ವಾಮಿ ದೇವೇಗೌಡರ ಹಣದ ರಾಜಕೀಯದ ಸ್ಯಾಂಪಲ್ ಇದು. ಭ್ರಷ್ಟಾಚಾರ ರಾಜ್ಯದಲ್ಲಿ ಮುಗಿಲು ಮುಟ್ಟಿದ್ದು, ಅಜ್ಜ- ಮೊಮ್ಮಕ್ಕಳು ಸೋಲುವುದು ಖಚಿತ ಎಂದು ಭವಿಷ್ಯ ನುಡಿದರು.
ಎಚ್ಡಿಕೆ ಹೇಳಿದ್ದೇನು?
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಿಎಂ ಎಚ್ಡಿಕೆ, ಯಡಿಯೂರಪ್ಪ ಆಡಿಯೋ ತನಿಖೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಆತುರ ಏನಿಲ್ಲ. ಆಡಿಯೋ ಎಲ್ಲೂ ಹೋಗಲ್ಲ. ಈಗಲೇ ತನಿಖೆಗೆ ಕೊಟ್ಟರೆ ಇನ್ಯಾವುದೋ ರೀತಿಯಲ್ಲಿ ಅಪಪ್ರಚಾರ ಮಾಡುತ್ತಾರೆ. ಅಧಿಕಾರ ದುರುಪಯೋಗ ಮಾಡಿ ಯಡಿಯೂರಪ್ಪನವರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಾರೆ. ಚುನಾವಣೆ ಮುಗಿಯಲಿ ಆಮೇಲೆ ತನಿಖೆ ಮಾಡುವದಾಗಿ ಸಿಎಂ ಹೇಳಿದ್ದರು