ಖಾದರ್ ಪಾಕಿಸ್ತಾನ ಪೌರತ್ವ ಪಡೆಯಲಿ: ಸುನಿಲ್‌ಕುಮಾರ್
ಕಾರ್ಕಳ: ಪೌರತ್ವ ಕಾಯಿದೆ ಕುರಿತು ಭಾರತೀಯ ಮುಸ್ಲಿಮರಲ್ಲಿ ಸುಳ್ಳು ಸುದ್ದಿ ಹರಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಕಿಹೊತ್ತಿಕೊಳ್ಳಲು ಶಾಸಕ ಯು.ಟಿ ಖಾದರ್ ನೇರ ಕಾರಣ, ಅವರಿಗೆ ಭಾರತದಲ್ಲಿ ನೆಲೆಸಲು ಸಾರ್ಧಯವಿಲ್ಲವೆಂದಾದರೆ ದಯವಿಟ್ಟು ಪಾಕಿಸ್ಥಾನದ ಪೌರತ್ವ ಪಡೆದುಕೊಂಡು ಅಲ್ಲಿಯೇ ನೆಲಸಲಿ ಎಂದು ಕಾರ್ಕಳ ಶಾಸಕ ಸುನಿಲ್‌ಕುಮಾರ್ ತಿರುಗೇಟು ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪಘಾನಿಸ್ತಾನ ದೇಶಗಳ ಮುಸ್ಲಿಮರಿಗೆ ದೇಶದ ಪೌರತ್ವ ನಿರಾಕರಿಸಲಾಗಿದೆ. ಯಾಕಂದರೆ ಮುಸ್ಲಿಂ ರಾಷ್ಟ್ರಗಳಲ್ಲಿ ಅವರು ಬಹುಸಂಖ್ಯಾತರಾಗಿದ್ದು ಶೋಷಣೆಗೆ ಒಳಗಾಗುತ್ತಿರುವ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂ, ಜೈನ್, ಸಿಖ್ಖ್,ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವುದೇ ಈ ಕಾಯಿದೆಯ ಉದ್ದೇಶ. ಈ ಕಾಯಿದೆಯಿಂದ ನಮ್ಮ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲದಿದ್ದರೂ ವಿನಾಕಾರಣ ಕಾಂಗ್ರೆಸ್ ಹಾಗೂ ವಿರೋಧಪಕ್ಷಗಳು ಮುಸ್ಲಿಮರಲ್ಲಿ ಸುಳ್ಳು ಪ್ರಚಾರ ಮಾಡಿ ಸಮಾಜದಲ್ಲಿ ಗಲಭೆ ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದರು ಆರೋಪಿಸಿದರು.
ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೇರಳದ ಕೆಲ ಸಂಘಟನೆಗಳ ಕಾರ್ಯಕರ್ತರು ಕಾನೂನುಬಾಹಿರವಾಗಿ ರಸ್ತೆಗಳಿದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಠಾಣಡಗಳಿಗೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾದಾಗ ಪೊಲೀಸರು ಗುಂಡುಹಾರಿಸಿದ ಪ್ರಕರಣವನ್ನು ಸಮರ್ಥಿಸಿಕೊಂಡ ಸುನಿಲ್‌ಕುಮಾರ್, ಇಂತಹ ಘಟನೆಗಳು ನಡೆದಾಗ ಪೊಲೀಸರು ತಮ್ಮ ಪ್ರಾಣರಕ್ಷಣೆ ಹಾಗೂ ಸಾರ್ವಜನಿಕರ ಪ್ರಾಣ ಆಸ್ತಿಪಾಸ್ತಿ ರಕ್ಷಣೆ ಮಾಡಲೇಬೇಕಾಯಿತು ಎಂದರು.
ಪೌರತ್ವ ಮಸೂದೆ ಪೌರತ್ವ ಕೊಡುವ ಕಾಯಿದೆಯೇ ವಿನಃ ಪೌರತ್ವ ಕಸಿಯುವ ಕಾಯಿದೆಯಲ್ಲ, ಪ್ರತಿಪ್ರಕ್ಷಗಳ ರಾಜಕೀಯ ಹುನ್ನಾರ ಅಡಗಿದ್ದು, ಸಮಾಜದಲ್ಲಿ ಅಶಾಂತಿ ವಾತಾವರಣ ಮೂಡಿಸುವುದೇ ಕಾಂಗ್ರೆಸ್ ಉದ್ದೇಶವಾಗಿದೆ. ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲವೆಂದರೂ ಕೇಳದ ಕಾಂಗ್ರೆಸ್ ನಾಯಕರ ಹೋರಾಟದ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು. ಭಾರತಕ್ಕೆ ಅಕ್ರಮವಾಗಿ ಬರುವ ನುಸುಳುಕೋರರಿಗೆ ಯಾವುದೇ ರೀತಿಯ ಪೌರತ್ವ ನೀಡುವ ಪ್ರಶ್ನೆಯೇ ಇಲ್ಲ,ದೇಶದಾದ್ಯಂತ ವಿರೋಧಪಕ್ಷಗಳು ಏನೇ ಪ್ರತಿಭಟನೆ ನಡೆಸಿದರೂ ಈ ಕಾಯಿದೆ ಯಥಾವತ್ತಾಗಿ ಜಾರಿಗೆ ಬರಬೇಕೆಂದು ಅವರು ಆಗ್ರಹಿಸಿದ್ದಾರೆ.