ಅಯೋಧ್ಯೆಯ ತೀರ್ಪು ಹಿಂದೂಗಳ ಪರ ಬಂದರೆ ಭಜನೆ ಮಾಡಿ: ಪೇಜಾವರ ಶ್ರೀ

ಉಡುಪಿ: ಅಯೋಧ್ಯೆಯ ಕುರಿತು ಇದೇ ತಿಂಗಳಲ್ಲಿ ತೀರ್ಪು ಪ್ರಕಟವಾಗಲಿದ್ದು ಈ ತೀರ್ಪು ಹಿಂದೂಗಳ ಪರವಾಗಿ ಬಂದಲ್ಲಿ ವಿಜಯೋತ್ಸವ ಮಾಡದೇ, ನಮ್ಮ ವಿರೋಧವಾಗಿ ಬಂದಲ್ಲಿ ಪ್ರತಿಭಟನೆಗಿಳಿಯದೆ ಶಾಂತವಾಗಿ ಸ್ವೀಕರಿಸುವಂತೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಜನರಿಗೆ ಮನವಿ ಮಾಡಿದ್ದಾರೆ.

ಅವರು ಇಂದು ಪೇಜಾವರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸದ್ಯವೇ ಅಯೋಧ್ಯೇಯ ತೀರ್ಪು ಹೊರಬಿಳಲಿದೆ, ಹಿಂದೂಗಳ ಪರ ತೀರ್ಪು ಬಂದ್ರೆ ವಿಜಯೋತ್ಸವ ಆಚರಣೆ ಬೇಡ ಅಲ್ಲದೆ ಯಾವುದೇ ಸಂಘಟನೆಯವರು ಬೀದಿಗಿಳಿದು ಮೆರವಣಿಗೆ, ಘೋಷಣೆ ಕೂಗಬಾರದು ಎಂದರು. ತೀರ್ಪನ್ನು ಶಾಂತವಾಗಿ ಸ್ವೀಕರಿಸಬೇಕು ಮತ್ತು ದೇವಸ್ಥಾನ, ಮಠದ ಒಳಗೆ ಹರ್ಷಾಚರಣೆ, ಭಜನೆಗಳನ್ನು ಮಾಡಿದರೆ ಸಾಕು ಎಂದು ಅವರು ಭಕ್ತರಿಗೆ ಹೇಳಿದ್ದಾರೆ.

ಅದೇ ರೀತಿಯಲ್ಲಿ ಮುಸ್ಲಿಂ ಬಾಂಧವರೂ ಕೂಡಾ ತೀರ್ಪನ್ನು ಶಾಂತವಾಗಿ ಸ್ವೀಕರಿಸಬೇಕು. ಪರ ಅಥವಾ ವಿರುದ್ಧ ತೀರ್ಪು ಬಂದರೆ ಅತಿರೇಕದ ವರ್ತನೆ ಬೇಡ ಹಿಂದೂಗಳು- ಮುಸಲ್ಮಾನರು ಸಮಾನವಾಗಿ ತೀರ್ಪನ್ನು ಸ್ವೀಕರಿಸಿ ಕರ್ನಾಟಕ ,ಕರಾವಳಿ ಸಹಿತ ದೇಶದ ಜನ ಶಾಂತವಾಗಿರಬೇಕು ಎಂದರು.

ತೀರ್ಪು ಅನುಕೂಲವಾಗಿ ಬರುತ್ತದೆ ಎಂದು ಭಾವಿಸಿದ್ದು, ಒಂದು ವಾರದ ಒಳಗೆ ರಾಮಮಂದಿರ ತೀರ್ಪು ಬರಬಹುದು. ಸಂವಿಧಾನ, ಸುಪ್ರೀಂ ಕೋರ್ಟ್‌ಗೆ ದೇಶದ ಜನ ಗೌರವ ಕೊಡಬೇಕು. ಯಾವುದೇ ಸಂಘರ್ಷ ಪ್ರತಿಭಟನೆಗೆ ಯಾರೂ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದ್ದಾರೆ.

ಟಿಪ್ಪು ಸುಲ್ತಾನ್‌ ಒಳ್ಳೆಯದನ್ನೂ ಮಾಡಿದ್ದಾನೆ. ಕೆಟ್ಟ ಕೆಲಸವನ್ನೂ ಮಾಡಿದ್ದಾನೆ. ಹಾಗಾಗಿ ಟಿಪ್ಪುವಿನ ಎರಡೂ ಮುಖಗಳು ಪಠ್ಯದಲ್ಲಿ ದಾಖಲಾಗಬೇಕು. ಟಿಪ್ಪು ಉತ್ತಮ ಆಡಳಿತ ಕೊಟ್ಟಿದ್ದಾನೆ. ಆಡಳಿತದಲ್ಲಿ ಸುಧಾರಣೆ ತಂದಿದ್ದಾನೆ. ಹಾಗೆಯೇ ವಿವಾದಿತ ವ್ಯಕ್ತಿ ಕೂಡ. ಕೊಡಗಿನವರ ಹಾಗೂ ಕ್ರೈಸ್ತರ ಹತ್ಯಾಕಾಂಡ ನಡೆಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಹಾಗಾಗಿ, ಟಿಪ್ಪುವಿನ ಎರಡೂ ಮುಖಗಳನ್ನು ಪಠ್ಯದಲ್ಲಿ ದಾಖಲಿಸಬೇಕು. ಇತಿಹಾಸದಲ್ಲಿ ಸತ್ಯಾಂಶ ಇರಬೇಕೇ ಹೊರತು, ಅತಿಶಯೋಕ್ತಿ ಇರಬಾರದು ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.‌

ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಿಗೆ ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆದಿದ್ದು ತಪ್ಪು. ಆದರೆ, ಪತ್ರ ಬರೆದ ಉದ್ದೇಶ ಬೇರೆ ಇತ್ತು. ಸಾಯುವವರೆಗೂ ಜೈಲಿನಲ್ಲಿ ಕೊಳೆಯುವ ಬದಲು ಬಿಡುಗಡೆಯಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವುದು ಸಾರ್ವರ್ಕರ್‌ ಉದ್ದೇಶವಾಗಿತ್ತು ಎಂದು ಶ್ರೀಗಳು ಸಮರ್ಥನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!