ಅಧ್ಯಕ್ಷ ಸ್ಥಾನ ನೀಡಿದರೆ ತಮ್ಮನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಮಾಡಬೇಕು: ಡಿಕೆಶಿ ಷರತ್ತು?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಮಗೆ ಪಕ್ಷದ ಜವಾಬ್ದಾರಿ ನೀಡಿದರೆ ತಮ್ಮನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪರಿಗಣಿಸಬೇಕು ಎಂದು ಷರತ್ತು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
  
ವೀಕ್ಷಕರ ತಂಡ ಎಐಸಿಸಿಗೆ ಸಲ್ಲಿಸಿದ ವರದಿಯಲ್ಲಿ ಶಿವಕುಮಾರ್ ಹೆಸರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಹೀಗಾಗಿ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಸೂಚನೆ ಮೇರೆಗೆ ಶಿವಕುಮಾರ್ ಜೊತೆ ಕೆ.ಸಿ.ವೇಣುಗೋಪಾಲ್ ಗುರುವಾರ ದೂರವಾಣಿ ಮೂಲಕ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ವೇಣುಗೋಪಾಲ್ ಅವರಿಗೆ ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.
  
ವಿಧಾನಸಭೆ ಚುನಾವಣೆಗೆ ಮೂರುವರೆ ವರ್ಷವಿದ್ದು, ಅಲ್ಲಿಯವರೆಗೆ ಪಕ್ಷ ಸಂಘಟನೆ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ  ಪಕ್ಷದ ಖರ್ಚು ವೆಚ್ಚ ಸಹ ಹೆಚ್ಚಾಗಲಿದೆ.  ಈ ಎಲ್ಲವನ್ನೂ ಹೊಂದಿಸಿಕೊಂಡು ಹೋಗಬೇಕು. ಸಾಂಪ್ರದಾಯಿಕವಾಗಿ ಪಕ್ಷದ ಅಧ್ಯಕ್ಷರಾದವರೇ ಮುಖ್ಯಮಂತ್ರಿ ಆಗಬೇಕು. ಹಾಗಾಗಿ ಈ ವಿಚಾರದ ಬಗ್ಗೆ ಪಕ್ಷದ ವರಿಷ್ಠರು ಗಮನಹರಿಸಬೇಕು ಎಂದಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಶಿವಕುಮಾರ್ ಜತೆ ಮಾತನಾಡಿದ ವೇಣುಗೋಪಾಲ್, ಹಿರಿಯ ನಾಯಕರ ಅಭಿಪ್ರಾಯ ನಿಮ್ಮ ಪರವಾಗಿದ್ದು, ಅಧ್ಯಕ್ಷ ಸ್ಥಾನ ನೀಡುವುದಕ್ಕೆ ಹೈಕಮಾಂಡ್ ಸಿದ್ಧವಿದೆ. ಆದರೆ ಎಐಸಿಸಿ ನಾಯಕರು ರಾಜ್ಯ ನಾಯಕರಲ್ಲಿರುವ ಅಸಮಾಧಾನವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯಕ್ಕೆ ಆಸ್ಪದ ಕೊಡದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಒಗ್ಗಟ್ಟಾಗಿ ಪಕ್ಷ ಸಂಘಟಿಸಬೇಕು. ಏಕಪಕ್ಷೀಯ ನಿರ್ಧಾರ ಅನುಸರಿಸದೇ ಸಿದ್ದರಾಮಯ್ಯ, ಪರಮೇಶ್ವರ್ ಕೆ.ಹೆಚ್ ಮುನಿಯಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಷರತ್ತು ಹಾಕಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಲ್ಲಿ ಟೋಪಿ ಐದು ನಿಮಿಷಕ್ಕೆ ಬದಲಾಗುತ್ತದೆ. ಪಕ್ಷದಲ್ಲಿ  ಬ್ಲಾಕ್ ಮೇಲ್, ಷರತ್ತುಗಳಿಗೆ ಆಸ್ಪದವಿಲ್ಲ. ಇಂತಯ ಯಾವುದೇ ಒತ್ತಡದ ರಾಜಕೀಯಕಾಂಗ್ರೆಸ್ ನಲ್ಲಿ ನಡೆಯುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಪಕ್ಷದಲ್ಲಿ ಯಾರಾದರೂ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದರೆ ಅದು ಸಾಧ್ಯವಿಲ್ಲ. ಅಂತಹ ಮೂರ್ಖರು ನಮ್ಮಲ್ಲಿಲ್ಲ. ಇಲ್ಲಿ ನಾನೂ ಹೇಳಿದಂತೆಯೇ ನಡೆಯಬೇಕು ಎಂದರೆ ಅದು ಸಾಧ್ಯವೇ ಇಲ್ಲ. ಪಕ್ಷದಲ್ಲಿ ನಾನೂ ಸೇರಿದಂತೆ ಯಾರ ಮಾತು ಸಹ ನಡೆಯುವುದಿಲ್ಲ. ಶಿಸ್ತಿನ ಸಿಪಾಯಿ ಆಗಿದ್ದರೆ ಮಾತ್ರ ಅಧಿಕಾರ, ಗೌರವ ಸಿಗುತ್ತದೆ. ಷರತ್ತು ಗಿರತ್ತು ಏನೂ ನಡೆಯುವುದಿಲ್ಲ ಎಂದರು. 

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡುವ ವಿಚಾರದ ಬಗ್ಗೆ ತಮಗೇನು ಏನೂ ಗೊತ್ತಿಲ್ಲ. ಕೆಪಿಸಿಸಿ ಎಲ್ಲಿಯೂ ಕುಸಿದು ಬಿದ್ದಿಲ್ಲ. ಶನಿವಾರ ಪಕ್ಷದ ಸಂಸ್ಥಾಪನ ದಿನದ ಕಾರ್ಯಕ್ರಮವಿದ್ದು, ಅಂದು ಎಲ್ಲರೂ ಪಕ್ಷದ ಧ್ವಜ  ಹಿಡಿದು ಮುನ್ನಡೆಯುತ್ತಾರೆ. ಹೊಸ ಅಧ್ಯಕ್ಷರೋ ಹಳೆ ಅಧ್ಯಕ್ಷರೋ ಗೊತ್ತಿಲ್ಲ. ದಿನೇಶ್ ಗುಂಡೂರಾವ್ ನೇತೃತ್ವದಲ್ಲಿಯೇ ಕಾರ್ಯಕ್ರಮ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!