ಅರಣ್ಯ ಸಂರಕ್ಷಣೆಯಾಗದಿದ್ದರೆ ಮತ್ತಷ್ಟು ಸಂಕಷ್ಟ:ಜಿಲ್ಲಾಧಿಕಾರಿ

ಉಡುಪಿ: ಇಂದು ಅನೇಕ ಜಿಲ್ಲೆಗಳಲ್ಲಿ ಅರಣ್ಯವನ್ನು ಚಿತ್ರದಲ್ಲಿ ನೋಡುವ ಪರಿಸ್ಥಿತಿ ಎದುರಾಗಿದ್ದು, ದಿನೇ ದಿನೇ ಅರಣ್ಯದ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇನ್ನೂ ಕೂಡ ಅರಣ್ಯ ಸಂರಕ್ಷಣೆ ಕಡೆಗೆ ಗಮನಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಮನುಷ್ಯ ಇನ್ನಷ್ಟು ಸಂಕಷ್ಟ ಎದುರಿಸಬೇಕಾದ ಸ್ಥಿತಿ ಬರಬಹುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಆತಂಕ ವ್ಯಕ್ತಪಡಿಸಿದರು.


ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅರಣ್ಯ ಇಲಾಖೆ ಹಾಗೂ ಉಡುಪಿ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ‘ವನ್ಯಜೀವಿ ಪತ್ರಿಕೋದ್ಯಮ ಮತ್ತು ಅರಣ್ಯ ಸಂರಕ್ಷಣೆ’ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋಲಾರದಂತಹ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ನಿತ್ಯ ಪರಿತಪಿಸುವ ಪರಿಸ್ಥಿತಿ ಇದೆ. ಪ್ರತಿದಿನ 1015 ಕೊಳವೆಬಾವಿ (ಬೋರವೆಲ್‌) ಖಾಲಿಯಾಗುತ್ತಿವೆ. ದಿನಕಳೆದಂತೆ ಅಂತರ್ಜಲದ ಮಟ್ಟ ಕ್ಷೀಣಿಸುತ್ತಿದ್ದು, ನೀರಿಗಾಗಿ 1500 ಅಡಿ ಆಳ ಭೂಮಿ ಕೊರೆಯಬೇಕಾಗಿದೆ. ಆದರೆ ಅಷ್ಟು ಆಳ ಕೊರೆದರು ಶುದ್ಧ ನೀರು ಸಿಗುತ್ತಿಲ್ಲ. ವಿವಿಧ ಲೋಹಗಳಿಂದ ಮಿಶ್ರಣಗೊಂಡಿರುವ ವಿಷಪೂರಿತ ನೀರು ಲಭಿಸುತ್ತಿದೆ. ಬಹಳ ದಿನಗಳ ಕಾಲ ಈ ನೀರನ್ನು ಕುಡಿದರೆ ಮನುಷ್ಯನ
ಜೀವಕ್ಕೆ ಸಂಚಕಾರ ಬರಬಹುದು. ಇದಕ್ಕೆಲ್ಲವೂ ನಾವೇ ಹೊಣೆಗಾರರಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಹಳ ಆಸಕ್ತಿಯಿಂದ ಬರುವವರ ಸಂಖ್ಯೆ ತೀರಾ ಕಡಿಮೆ. ಯಾವುದೇ ವಿಚಾರವನ್ನು ಕಾಳಜಿ ವಹಿಸಿ, ತಿಳಿದುಕೊಂಡು ಬರೆಯುವವರು ಕೂಡ ವಿರಳರಾಗಿದ್ದಾರೆ. ವನ್ಯಜೀವಿ ಮತ್ತು ಸಂರಕ್ಷಣೆ ಬಗ್ಗೆ ಅತ್ಯಂತ ಸೂಕ್ಷ್ಮ ವಾಗಿ ಹಾಗೂ ಅಧ್ಯಯನ ಮಾಡಿ ಬರೆಯಬೇಕಾಗುತ್ತದೆ. ಆದರೆ ಇಂದಿನ ಯುವಪತ್ರಕರ್ತರಿಗೆ ಇಂತಹ ಕ್ಷೇತ್ರಗಳಲ್ಲಿ ಸೂಕ್ಷ್ಮತೆಯೂ ಇಲ್ಲ ಹಾಗೂ ಬರವಣೆಗೆ ಸಹ ಪ್ರೌಢಿಮೆಯಿಂದ ಕೂಡಿರಲ್ಲ. ವನ್ಯಜೀವಿ, ಅರಣ್ಯದ ಬಗ್ಗೆ ತಿಳಿದುಕೊಂಡು ಅಧ್ಯಯನ ಮಾಡಿದಾಗ ಮಾತ್ರ ಗುಣಮಟ್ಟದ ವರದಿ ಬರೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವನ್ಯಜೀವಿ ತಜ್ಞ ಸೇನಾನಿ ಮಾತನಾಡಿ, ಮನುಷ್ಯ ಪ್ರಕೃತಿ ಒಂದು ಭಾಗ. ಇದನ್ನು ಮನುಷ್ಯ ಅರಿತುಕೊಳ್ಳಬೇಕು. ಆಗ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಪ್ರಕೃತಿ ಮನುಷ್ಯನಿಗೆ ಅವಶ್ಯವೇ ಹೊರತು ಪ್ರಕೃತಿಗೆ ಮನುಷ್ಯ ಅವಶ್ಯಕತೆ ಇಲ್ಲ. ಹಾಗಾಗಿ ಮನುಷ್ಯ ತನ್ನ ಬದುಕಿಗಾಗಿ ಪ್ರಕೃತಿಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸಿದ್ದರು. ವನ್ಯಜೀವಿ ತಜ್ಞ ಕೃಪಾಕರ, ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್‌ ಲೋಬೋ, ಶಂಕರನಾರಾಯಣದ ವಲಯ ಅರಣ್ಯಾಧಿಕಾರಿ ಎ.ಎ ಗೋಪಾಲ್‌, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ ಕುಮಾರ್‌ ಉಪಸ್ಥಿತರಿದ್ದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್‌
ಕಾಮತ್‌ ಸ್ವಾಗತಿಸಿದರು. ವಿದ್ಯಾರ್ಥಿ ಗೌತಮ್‌ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!